ಮಡಿಕೇರಿ, ಸೆ. ೩೦: ಐತಿಹಾಸಿಕ ನಾಡ ಹಬ್ಬ, ಮಡಿಕೇರಿ ದಸರಾ-ಜನೋತ್ಸವ ಅಂಗವಾಗಿ ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಮಹಿಳಾ ದಸರಾ ಏರ್ಪಡಿಸಲಾಗಿತ್ತು. ಮಹಿಳೆಯರಿಗಾಗಿಯೇ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬಂದಿದ್ದವರು ಸಂಭ್ರಮಿಸಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಲೂನಿಗೆ ಗುಂಡು ಹೊಡೆಯುವದು, ಮಧರಂಗಿ ಹಚ್ಚುವದು, ಛದ್ಮವೇಷ, ಸೌಂದರ್ಯ ಪ್ರದರ್ಶನ ಸ್ಪರ್ಧೆ, ಪಾಸಿಂಗ್ ದ ಬಾಲ್, ಬಾಂಬ್ ಇನ್ ದ ಸಿಟಿ, ಸೀರೆಗೆ ದರ ಹೇಳುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದುಕೊಂಡರು. ಮಹಿಳಾ ಸಂತೆ ವಿಭಾಗದಲ್ಲಿ ಕೆಲವರು ಹೂವಿನ ಗಿಡಗಳು, ಹಣ್ಣು, ತರಕಾರಿ, ವೈನ್, ತಿಂಡಿಗಳನ್ನು ಮಾರಾಟಕ್ಕೆ ಇಟ್ಟಿದ್ದರು.
ಕಾರ್ಯಕ್ರಮಕ್ಕೆ ಚಾಲನೆ
ಮಹಿಳಾ ದಸರಾ ಸಭಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಪತ್ನಿ ರೂಪಶ್ರೀ ಸತೀಶ್ ಚಾಲನೆ ನೀಡಿದರು. ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ವರ್ಷಗಳ ಹಿಂದೆ ಜಿಲ್ಲೆಯ ಮೂರು ಉನ್ನತ ಸ್ಥಾನಗಳನ್ನು ಮಹಿಳೆಯರು ಅಲಂಕರಿಸಿದ್ದರು, ಇದು ಮಹಿಳೆಯರಿಗೆ ಹೆಮ್ಮೆಯ ವಿಷಯವಾಗಿದೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಮಹಿಳೆಯರು ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿ ಕೊಂಡು ಸಾಧನೆ ಮಾಡುವಂತಾಗ ಬೇಕು.
(ಮೊದಲ ಪುಟದಿಂದ) ಈ ಬಾರಿಯ ಮಡಿಕೇರಿ ದಸರಾ ಬಹಳ ವಿಜೃಂಭಣೆಯಿAದ ನಡೆಯುತ್ತಿದೆ ಮೈಸೂರು ದಸರಾ ಮಾದರಿಯಲ್ಲಿ ಮಡಿಕೇರಿ ದಸರಾ ಕೂಡ ನಡೆಯುತ್ತಿದೆ. ದಸರಾ ಉತ್ಸವದಲ್ಲಿ ನಗರದ ಶಕ್ತಿ ದೇವತೆಗಳ ಆರಾಧನೆ ಹಾಗೂ ಕರಗೋತ್ಸವ ಜೊತೆಗೆ ದಶಮಂಟಪಗಳು ಮಡಿಕೇರಿ ದಸರಾದ ವಿಶೇಷ ಎಂದರು.
ಮಹಿಳೆಯರು ಯಾರಿಗೂ ಕೂಡ ಕಮ್ಮಿ ಇಲ್ಲ. ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ಉತ್ತೇಜನ ನೀಡುವಂತಾಗಬೇಕು. ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಕೂಡ ತಮ್ಮನ್ನು ಗುರುತಿಸಿಕೊಳ್ಳುವುದರ ಜೊತೆಗೆ ಕೊಡಗನ್ನು ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿಸುವತ್ತ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಅವರ ಪತ್ನಿ ರೂಪಶ್ರೀ ಸತೀಶ್ ಅವರು ಮಾತನಾಡಿ ಮೈಸೂರು ಮತ್ತು ಮಡಿಕೇರಿ ದಸರಾ ಒಂದೊAದು ವಿಶೇಷತೆಗಳಿಂದ ಕೂಡಿದೆ. ಮಡಿಕೇರಿ ದಸರಾ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿದೆ ಎಂದರು.
ನಗರಸಭಾ ಮಾಜಿ ಸದಸ್ಯೆ ಮೋಂತಿ ಗಣೇಶ್ ಅವರು ಮಾತನಾಡಿ, ಮಹಿಳೆಯರು ತಮ್ಮ ಮಕ್ಕಳಿಗೆ ದೇಶಭಕ್ತಿ ಹಾಗೂ ಸಮಾಜದ ಒಳಿತಿಗೆ ಸಹಕಾರಿಯಾಗುವಂತಹ ಒಳ್ಳೆಯ ಗುಣಗಳನ್ನು ಬೆಳೆಸುವಂತಾಗಬೇಕು, ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ಪರಿಸರವನ್ನು ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಮಹಿಳೆಯರು ಪರಿಸರ ಶುಚಿತ್ವದ ಬಗ್ಗೆ ಹೆಚ್ಚಿನ ಒತ್ತು ನೀಡಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸುವಂತಾಗಬೇಕು ಎಂದು ಮನವಿ ಮಾಡಿದರು.
ನಗರಸಭೆ ನಿವೃತ್ತ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಮಾತನಾಡಿ ನವರಾತ್ರಿ ಉತ್ಸವ ಮಹಿಳಾ ಪ್ರಧಾನ ಆಚರಣೆಯಾಗಿದೆ. ಈ ಆಚರಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಮುಂದಿನ ದಿನಗಳಲ್ಲಿ ದಸರಾಕ್ಕೆ ಅನುದಾನ ರೂಪಿಸುವಾಗ ಮಹಿಳಾ ದಸರಾಕ್ಕೆ ಹೆಚ್ಚಿನ ಅನುದಾನ ಮೀಸಲಿಡುವಂತಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಕರೆಸುವಂತಾಗಬೇಕು. ಇದರಿಂದ ಅವರ ಅನುಭವಗಳು ಅವರು ಮಾಡಿದ ಸಾಧನೆ ಇನ್ನಿತರ ಮಹಿಳೆಯರಿಗೆ ಸ್ಫೂರ್ತಿ ದಾಯಕವಾಗಬಹುದು ಎಂದು ಅಭಿಪ್ರಾಯಿಸಿದರು.
ಕೊಡವ ಸಮಾಜದ ನಿರ್ದೇಶಕಿ ಕನ್ನಂಡ ಕವಿತಾ ಅವರು ಮಾತನಾಡಿ, ಮೈಸೂರು ದಸರಾ ವಿಶ್ವವಿಖ್ಯಾತ ದಸರಾ ಉತ್ಸವವಾಗಿದೆ. ಅದೇ ರೀತಿಯಾಗಿ ಮಡಿಕೇರಿ ದಸರಾವೂ ಕೂಡ ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿನ ಶಕ್ತಿ ದೇವತೆಗಳ ಆರಾಧನೆಯೊಂದಿಗೆ ನಡೆಯುವ ಕರಗೋತ್ಸವವು ಎಲ್ಲರ ಆಕರ್ಷಣೀಯವಾಗಿದೆ ಎಂದರು.
ಮಹಿಳೆಯರು ತಮ್ಮ ಒತ್ತಡದ ಜೀವನದ ನಡುವೆಯೂ ಮಹಿಳಾ ದಸರಾದಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದರಿಂದ ತಮ್ಮ ಒತ್ತಡದ ಬದುಕಿನ ಜೊತೆಯಲ್ಲಿ ಉತ್ಸಾಹದಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇದೊಂದು ಸದಾವಕಾಶವಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಇದು ಹೆಮ್ಮೆಯ ವಿಷಯ ಎಂದು ಹೇಳಿದರು.
ನಗರಸಭಾ ವ್ಯವಸ್ಥಾಪಕಿ ಸುಜಾತ ಮಾತನಾಡಿ, ಕಳೆದೆರಡು ವರ್ಷಗಳಿಂದ ಕಳೆಗುಂದಿದ ಮಡಿಕೇರಿ ದಸರಾ ಈ ಬಾರಿ ವಿಜೃಂಭಣೆಯಿAದ ನಡೆಯುತ್ತಿದೆ. ಮಹಿಳೆಯರು ರಾಜಕೀಯ, ಕ್ರೀಡೆ, ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನಯನ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆಂಚೆಟ್ಟಿರ ರೇಷ್ಮಾ ದೇವಯ್ಯ (ಕ್ರೀಡಾ ಕ್ಷೇತ್ರ), ಲಕ್ಷಿö್ಮ (ಪೌರಕಾರ್ಮಿಕರು), ಶೋಭಾ ಮುತ್ತಪ್ಪ (ಕ್ರೀಡಾ ಕ್ಷೇತ್ರ), ನಿರ್ಮಲ (ಅಂಗನವಾಡಿ ಕಾರ್ಯಕರ್ತೆ), ಎಂ.ಪಿ.ಕನಿಕೆ (ಆಶಾ ಕಾರ್ಯಕರ್ತೆ).
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ನಗರಸಭಾ ಸದಸ್ಯರು, ದಸರಾ ಸಮಿತಿ ಸದಸ್ಯರು, ಮಹಿಳೆಯರು ಇತರರು ಇದ್ದರು. ಕಡ್ಲೇರ ತುಳಸಿ ಮೋಹನ್ ಪ್ರಾರ್ಥಿಸಿ, ಅನಿತಾ ದೇವಯ್ಯ ನಿರೂಪಿಸಿ, ಶೈಲ ವಂದಿಸಿದರು.