ಮಡಿಕೇರಿ, ಸೆ. ೩೦: ಮಡಿಕೇರಿ ದಸಾರ ಸಮಿತಿ, ದಸರಾ ಕ್ರೀಡಾ ಸಮಿತಿ ಆಶ್ರಯದಲ್ಲಿ ನಡೆದ ಆಹ್ವಾನಿತ ದಸರಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಸರಾ ಕ್ರೀಡಾ ಸಮಿತಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೊಡಗು ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್, ಪೌರ ಸೇವಾ ಸಂಘ, ಜಿಲ್ಲಾ ಕಾರಾಗೃಹ ತಂಡ, ಕೊಡಗು ಪೊಲೀಸ್ ತಂಡ, ದಸರಾ ಸಮಿತಿ, ದಸರಾ ಕ್ರೀಡಾ ಸಮಿತಿ, ಶಿಕ್ಷಕರ ಸಂಘದ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಅಂತಿಮ ಹಂತಕ್ಕೆ ತಲುಪಿದ್ದ ಕೊಡಗು ಪೊಲೀಸ್ ತಂಡವನ್ನು ಮಣಿಸಿದ ದಸರಾ ಕ್ರೀಡಾ ಸಮಿತಿ ತಂಡ ಬಹುಮಾನ ಗೆದ್ದುಕೊಂಡಿದೆ.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಕೊಡಗು ಪತ್ರಕರ್ತರ ಸಂಘದ ಎದುರು ಕೊಡಗು ಪೊಲೀಸ್ ತಂಡ ಜಯಗಳಿಸಿ ಫೈನಲ್ ಗೇರಿದರೆ, ದಸರಾ ಸಮಿತಿ ಎದುರು ಕ್ರೀಡಾ ಸಮಿತಿ ತಂಡ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು.