ಚಿತ್ರ, ವರದಿ: ವಾಸು ಎ.ಎನ್.
ಸಿದ್ದಾಪುರ, ಸೆ. ೨೯: ಬಹಿರ್ದೆಸೆಗೆ ಕಾಡಿಗೆ ತೆರಳಿದ ಕಾರ್ಮಿಕನೋರ್ವ ಸಾಕಾನೆ ಧಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದುಬಾರೆ ಗಿರಿಜನ ಹಾಡಿಯಲ್ಲಿ ಸಂಭವಿಸಿದೆ. ದುಬಾರೆ ಹಾಡಿಯ ನಿವಾಸಿ ಜೇನುಕುರುಬರ ಬಸಪ್ಪ (೨೪) ಎಂಬ ಯುವಕನೇ ಸಾಕಾನೆ ದಾಳಿಗೆ ಸಿಲುಕಿ ಮೃತಪಟ್ಟ ದುರ್ದೈವಿ.
ದುಬಾರೆಯ ಸಾಕಾನೆ ಶಿಬಿರದಲ್ಲಿರುವ ಸಾಕಾನೆಗಳನ್ನು ಎಂದಿನAತೆ ಸಮೀಪದ ಕಾಡಿನೊಳಗೆ ಮೇಯಲು ಬಿಡಲಾಗುತ್ತದೆ. ಗುರುವಾರದಂದು ಮೇಯಲು ಬಿಟ್ಟಿದ್ದ ನಂಜುAಡ (೪೨ ವಯಸ್ಸು) ಎಂಬ ಹೆಸರಿನ ಆನೆ ಕಾಡಿನಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ಬೆಳಿಗ್ಗೆ ಅಂದಾಜು ೮ ಗಂಟೆ ವೇಳೆಗೆ ಬಸಪ್ಪ ಬಹಿರ್ದೆಸೆಗೆ ತೆರಳುತ್ತಿದ್ದಾಗ ಈತನನ್ನು ಕಂಡು ಅಟ್ಟಾಡಿಸಿಕೊಂಡು ಬಂದಿದೆ. ಆನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ಸಂದರ್ಭ ಎಡವಿ ಬಿದ್ದಾಗ ಆನೆ ದಾಳಿ ನಡೆಸಿದ್ದು, ಬಸಪ್ಪನ ಎದೆಗೆ ತುಳಿದಿದೆ. ಈ ಸಂದರ್ಭ ಬಸಪ್ಪ ಕಿರುಚಿದಾಗ ಸಮೀಪದಲ್ಲಿ ಇದ್ದ ಸ್ಥಳೀಯರು ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅರಣ್ಯಾಧಿಕಾರಿ ಗಳೊಂದಿಗೆ ಕರೆ ತಂದಿದ್ದಾರೆ. ಆಸ್ಪತ್ರೆ ತಲುಪುವಷ್ಟರಲ್ಲಿ ಬಸಪ್ಪ ಮೃತಪಟ್ಟಿರುತ್ತಾನೆ.
ದಾಳಿ ಸಂದರ್ಭ ಬಸಪ್ಪ ನೊಂದಿಗಿದ್ದ ಹಾಡಿಯ ನಿವಾಸಿ ರವಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಅರಣ್ಯ ಇಲಾಖಾಧಿಕಾರಿಗಳ ಪ್ರಕಾರ ಸಾಕಾನೆಗಳು ಮಾವುತರು ಹಾಗೂ ಕಾವಾಡಿಗಳಲ್ಲದೇ ಬೇರೆ ಯಾರನ್ನೂ ಸಮೀಪಕ್ಕೆ ಬರಮಾಡಿಕೊಳ್ಳುವುದಿಲ್ಲ. ಅಲ್ಲದೇ ಅಪರಿಚಿತ ವ್ಯಕ್ತಿಗಳನ್ನು ಕಂಡ ಕೂಡಲೇ ಅವುಗಳಿಗೆ ಕೋಪ ಬರುತ್ತದೆ ಎಂದು ಹೇಳಿದ್ದಾರೆ. ಮೃತ ಬಸಪ್ಪ ಆನೆಯ ಬಳಿ ತೆರಳುತ್ತಿರುವ ಸಂದರ್ಭ ಈ ಘಟನೆ ನಡೆದಿರ ಬಹುದೆಂದು ಊಹಿಸಿದ್ದಾರೆ.
ಘಟನೆ ಸ್ಥಳಕ್ಕೆ ಮಡಿಕೇರಿ ವಿಭಾಗದ ಡಿ.ಸಿ.ಎಫ್ ಪೂವಯ್ಯ, ಎ.ಸಿ.ಎಫ್ ಎ.ಎ. ಗೋಪಾಲ, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ, ಉಪವಲಯಾರಣ್ಯಾಧಿಕಾರಿ ಕನ್ನಂಡ ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬAಧ ಮೃತ ಜೆ.ಕೆ. ಬಸಪ್ಪನ ಪತ್ನಿ ಜೇನು ಕುರುಬರ ವಿದ್ಯಾ ಸಿದ್ದಾಪುರ ಠಾಣೆಗೆ ದೂರು ನೀಡಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಸಪ್ಪ ಪತ್ನಿ ಹಾಗೂ ೫ ವರ್ಷದ ಹೆಣ್ಣು ಮಗು ಹಾಗೂ ೪ ತಿಂಗಳ ಹೆಣ್ಣು ಮಗು ಮತ್ತು ತಾಯಿಯನ್ನು ಅಗಲಿದ್ದಾನೆ.
(ಮೊದಲ ಪುಟದಿಂದ)
ಕುಟುAಬಸ್ಥರ ಆಕ್ರಂದನ
ಮನೆಗೆ ಆಧಾರ ಸ್ತಂಭವಾಗಿದ್ದ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದುಬಾರೆ ಹಾಡಿಯ ನಿವಾಸಿ ಶ್ರಮಜೀವಿ ಜೆ.ಕೆ ಬಸಪ್ಪ ಸಾಕಾನೆ ಧಾಳಿಗೆ ಸಿಲುಕಿ ಮೃತಪಟ್ಟಿದ್ದು, ಮನೆಗೆ ಆಧಾರ ಸ್ತಂಭವನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಬಸಪ್ಪನ ಮೃತದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಮೃತನ ಕುಟುಂಬಕ್ಕೆ ಪರಿಹಾರ
ಸಾಕಾನೆ ದಾಳಿಯಿಂದ ಸಾವನ್ನಪ್ಪಿದ ಬಸಪ್ಪನ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ಒಟ್ಟು ಮೊತ್ತ ರೂ. ೭.೫೦ ಲಕ್ಷ ಪೈಕಿ ರೂ.೨ ಲಕ್ಷ ಮೊತ್ತದ ಚೆಕ್‌ನ್ನು ಗುರುವಾರ ಅರಣ್ಯ ಇಲಾಖಾಧಿಕಾರಿಗಳು ಕುಟುಂಬಕ್ಕೆ ಹಸ್ತಾಂತರಿಸಿದರು. ಉಳಿದ ರೂ. ೫.೫೦ನ್ನು ಬಳಿಕ ನೀಡಲಾಗುವುದು ಎಂದು ತಿಳಿಸಿದ್ದಾರೆ.