ಕುಶಾಲನಗರ, ಸೆ. ೩೦: ವೃದ್ಧೆಯೊಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಮಂಕು ಬರುವಂತೆ ಮಾಡಿ ಚಿನ್ನಾಭರಣ ಅಪಹರಿಸಿದ ಘಟನೆ ಕುಶಾಲನಗರದ ಸಮೀಪ ಜನತಾ ಕಾಲೋನಿಯಲ್ಲಿ ನಡೆದಿದೆ.
ಜನತಾ ಕಾಲೋನಿ ೧ನೇ ಕ್ರಾಸ್ ನಿವಾಸಿ ಅಬಕಾರಿ ಇಲಾಖೆ ನಿವೃತ್ತ ನೌಕರ ಐತಪ್ಪ ಎಂಬವರ ಪತ್ನಿ ದೇವಮ್ಮ ಎಂಬ ಮಹಿಳೆ ವಂಚನೆಗೆ ಒಳಗಾದವರು.
ಜನತಾ ಕಾಲೋನಿಯಲ್ಲಿ ಗೌರಿ ಗಣೇಶ ದೇವಾಲಯದ ಬಳಿ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿ ದೇವಾಲಯಕ್ಕೆ ಕಾಣಿಕೆ ನೀಡುವ ನೆಪದಲ್ಲಿ ಮಹಿಳೆಯೊಂದಿಗೆ ಮಾತು ಬೆಳೆಸಿ ಮನೆಯಂಗಳಕ್ಕೆ ಬಂದಿದ್ದಾನೆ. ಗಂಧದ ಕಡ್ಡಿ, ಬಿಸ್ಕತ್ ಪ್ಯಾಕ್, ಫೈವ್ ಸ್ಟಾರ್ ಚಾಕಲೇಟ್ ತುಂಬಿದ್ದ ಪ್ಲಾಸ್ಟಿಕ್ ಕವರ್ ಅನ್ನು ದೇವಮ್ಮಗೆ ನೀಡಿದ್ದಾನೆ. ೧೦೦ ರೂ. ಗಳ ಐದು ನೋಟು ಕೈಗೆ ನೀಡಿ ದೇವಾಲಯಕ್ಕೆ ಕಾಣಿಕೆ ಅರ್ಪಿಸಿ ಎಂದು ಹೇಳಿದ ವ್ಯಕ್ತಿ ಬಳಿಕ ೧೦೦ ರೂ. ಒಂದು ನೋಟನ್ನು ಮಹಿಳೆಯ ಕೈಗೆ ಸುತ್ತುತ್ತಿದ್ದಂತೆ ಮಹಿಳೆ ಮತ್ತು ಆಕೆಯ ಜೊತೆಯಲ್ಲಿದ್ದ ಪತಿಗೆ ಮಂಕು ಬಡಿದಂತಾಗಿದೆ.
ಈ ಸಂದರ್ಭ ಅಪರಿಚಿತನ ಬೇಡಿಕೆಯಂತೆ ಕೈಯಲ್ಲಿದ್ದ ತಲಾ ೧೨ ಗ್ರಾಂನ ಎರಡು ಬಳೆಗಳನ್ನು ಬಿಚ್ಚಿ ಕೊಟ್ಟಿದ್ದಾರೆ. ಒಂದು ಹಂತದಲ್ಲಿ ಬಳೆ ಬಿಚ್ಚಿಕೊಟ್ಟ ಬಳಿಕ ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ ಪತಿ ಐತಪ್ಪ ಅವರಿಗೆ ಎಚ್ಚರವಾಗುತ್ತಿದ್ದಂತೆ ಅಪರಿಚಿತ ವ್ಯಕ್ತಿ ಚಿನ್ನದೊಂದಿಗೆ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಇತ್ತ ವಂಚನೆಗೆ ಒಳಗಾದ ಮಹಿಳೆ ಸುಧಾರಿಸಿಕೊಂಡು ನೋಡುವಷ್ಟರಲ್ಲಿ ಬಳೆಯೊಂದಿಗೆ ಅಪರಿಚಿತ ಮಾಯವಾಗಿದ್ದಾನೆ.
ಬೈಕ್ ಅನ್ನು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ ಬಂದಿದ್ದ ಅಪರಿಚಿತನೊಂದಿಗೆ ಮತ್ತೊಬ್ಬ ಇದ್ದ ಎನ್ನಲಾಗಿದ್ದು, ಕೂಡಲೇ ಪೊಲೀಸ್ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ವಂಚಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.