ಸುಂಟಿಕೊಪ್ಪ, ಸೆ. ೨೯: ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಸ್ವಾಧೀನದಲ್ಲಿದ್ದ ಜಾಗದಲ್ಲಿ ಅರ್ಧ ಜಾಗವನ್ನು ಬಲಾತ್ಕಾರವಾಗಿ ಅಕ್ರಮ ಪ್ರವೇಶ ಮಾಡಿ ವೃದ್ಧಾಶ್ರಮವೊಂದಕ್ಕೆ ನೀಡುವ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಆರೋಪಿಸಿದ್ದಾರೆ.

ಸುಂಟಿಕೊಪ್ಪದ ನ್ಯೂಸ್ ಗ್ಯಾಲರಿ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದರ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರು ಮತ್ತು ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.

ತೀರಾ ಬಡತನ ಹಿನ್ನೆಲೆಯ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಕುಟುಂಬಸ್ಥರನ್ನು ಬಲಾತ್ಕಾರವಾಗಿ ಯಾವುದೇ ಮುನ್ಸೂಚನೆ ನೀಡದೆ ಅವರ ಕೃಷಿ ಮತ್ತು ಬೆಲೆಬಾಳುವ ಮರವನ್ನು ರಾತೋರಾತ್ರಿ ಆಡಳಿತಕಾರರು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ. ಈ ಕಾರ್ಯದಲ್ಲಿ ಮತ್ತು ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಪ್ರಮುಖರು ಭಾಗಿಯಾಗಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ವೀಡಿಯೋ ಹಾಗೂ ಇತರ ಸಾಕ್ಷಿಗಳು ಇವೆ ಎಂದು ಶಶಿಧರ್ ನುಡಿದರು. ಈ ವ್ಯಕ್ತಿ ಆಸ್ಪತ್ರೆ ನಿವೇಶನಕ್ಕಾಗಿ ತಮ್ಮ ಅರ್ಧ ಜಾಗ ಬಿಟ್ಟುಕೊಡಲು ಒಪ್ಪಿದ್ದಾರೆ ಎಂದು ಮಾಹಿತಿಯಿತ್ತರು.

ಈಗಾಗಲೇ ತಹಶೀಲ್ದಾರ್, ಉಪ ತಹಶೀಲ್ದಾರ್, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗೆ ದೂರು ನೀಡಿದ್ದು, ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳದಿದ್ದರೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಶಶಿಧರ್ ಎಚ್ಚರಿಸಿದರು.

ಗೋಷ್ಠಿಯಲ್ಲಿ ೭ನೇ ಹೊಸಕೋಟೆ ಗ್ರಾ.ಪಂ. ಸದಸ್ಯರಾದ ಕುಂಞÂಕುಟ್ಟಿ ಮುಸ್ತಾಫ, ಸಿದ್ದೀಕ್, ಗ್ರಾಮಸ್ಥರಾದ ದಾಸಂಡ ದಿನೇಶ್ ಹಾಗೂ ಜಾಗದ ಮಾಲೀಕ ಆನಂದ ಕುಮಾರ್ ಮತ್ತು ಇತರರು ಹಾಜರಿದ್ದರು.