ಸೋಮವಾರಪೇಟೆ, ಸೆ. ೨೮: ಇಲ್ಲಿನ ಶ್ರೀ ಬಸವೇಶ್ವರ ಮತ್ತು ಸೋಮೇಶ್ವರ ದೇವಾಲಯದಲ್ಲಿ ನವರಾತ್ರಿ ಉತ್ಸವಕ್ಕೆ ಪೂಜಾ ವಿಧಿವಿಧಾನಗಳ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು.

ಇಲ್ಲಿನ ಬ್ರಾಹ್ಮಣ ಸಮಾಜದ ಶ್ರೀ ಸೋಮೇಶ್ವರ ದೇವಾಲಯಲ್ಲಿ ಪ್ರಾರಂಭಗೊAಡ ಉತ್ಸವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಿವೃತ್ತ ಕ್ಯಾಪ್ಟನ್ ರತನ್ ಪದ್ಮನಾಭ ಅವರ ಮನೆಯಿಂದ ಉತ್ಸವ ಮೂರ್ತಿಯನ್ನು ಆನೆಕೆರೆಗೆ ಮೆರವಣಿಗೆ ಮೂಲಕ ಕೊಂಡೊಯ್ದು, ಗಂಗಾಪೂಜೆ ನೆರವೇರಿಸಲಾಯಿತು. ನಂತರ ದುರ್ಗಾದೇವಿಯ ವಿಗ್ರಹವನ್ನು ದೇವಾಲಯಕ್ಕೆ ತಂದು ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಅರ್ಚಕ ಚಿತ್ರಕುಮಾರ್‌ಭಟ್ ಪುರೋಹಿತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳ ನಂತರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಅರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಸಿ.ಸತೀಶ್, ಯಡೂರು ಹರೀಶ್, ಎಸ್.ಆರ್. ಸೋಮೇಶ್, ಎಸ್.ಜಿ. ಆನಂದ್, ಎಸ್.ಎನ್. ಸೋಮಶೇಖರ್, ರಾಜೇಶ್ ಪದ್ಮನಾಭ್, ಶ್ಯಾಂಸುAದರ್, ರತಿ ನಂದಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಸವೇಶ್ವರ ದೇವಾಲಯದ ನವರಾತ್ರಿ ಉತ್ಸವಕ್ಕೆ ಧಾರ್ಮಿಕ ಕೈಂಕರ್ಯಗಳ ಮೂಲಕ ಚಾಲನೆ ನೀಡಲಾಯಿತು. ಆನೆಕೆರೆಯಲ್ಲಿ ಉತ್ಸವಮೂರ್ತಿಯ ಗಂಗಾಪೂಜೆ ನೆರವೇರಿದ ನಂತರ ದೇವಾಲಯದಲ್ಲಿ ಉತ್ಸವಮೂರ್ತಿ ಪ್ರತಿಷ್ಠಾಪಿಸಲಾಯಿತು. ಅರ್ಚಕ ವಿನಿತ್ ಹಿರೇಮಠ್ ಅವರ ಪೌರೋಹಿತ್ವದಲ್ಲಿ ಘಟಸ್ಥಾಪನೆಯೊಂದಿಗೆ ಪ್ರಸಕ್ತ ವರ್ಷದ ಉತ್ಸವಕ್ಕೆ ಚಾಲನೆ ನೀಡಲಾಯಿತು.

ನಂತರ ದೇವಿಮೂರ್ತಿಯ ಪ್ರತಿಷ್ಠಾಪನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಜರುಗಿತು. ಈ ಸಂದರ್ಭ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಮೃತ್ಯುಂಜಯ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.