ಸೋಮವಾರಪೇಟೆ, ಸೆ. ೨೮: ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ತಾಣವಾಗಿರುವ ಮಕ್ಕಳಗುಡಿ ಬೆಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಈ ಬಗ್ಗೆ ಪೊಲೀಸ್ ಠಾಣೆ ಮೌನ ವಹಿಸಿದೆ ಎಂದು ಕಿರಗಂದೂರು ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು ಆರೋಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈರ್ವರು ಮಕ್ಕಳ ಗುಡಿ ಬೆಟ್ಟದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ತನಿಖೆ ನಡೆಸಿಲ್ಲ. ಮುಂದಿನ ೧೫ ದಿನಗಳ ಒಳಗೆ ಪ್ರಕರಣದ ನೈಜಾಂಶವನ್ನು ಬಯಲಿಗೆ ಎಳೆಯದಿದ್ದರೆ ಗ್ರಾಮಸ್ಥರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರಮುಖರು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿರಗಂದೂರು ಗ್ರಾ.ಪಂ. ಅಧ್ಯಕ್ಷ ಎಸ್.ಕೆ. ರಘು ಅವರು, ಕಳೆದ ತಾ. ೧೪.೦೬.೨೦೨೧ ಮತ್ತು ೦೧.೦೭.೨೦೨೨ರಂದು ಈರ್ವರ ಮೃತದೇಹವು ಬೆಟ್ಟದ ತಳಭಾಗದಲ್ಲಿರುವ ಕಾಫಿ ತೋಟದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಪ್ರವಾಸಿ ತಾಣವಾಗಿ ಖ್ಯಾತಿ ಗಳಿಸುತ್ತಿರುವ ಮಕ್ಕಳಗುಡಿ ಬೆಟ್ಟವು ಈ ಘಟನೆಗಳಿಂದ ಅಪಖ್ಯಾತಿಗೆ ಒಳಗಾಗುತ್ತಿದೆ. ಪ್ರವಾಸಿಗರು ಧೈರ್ಯದಿಂದ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದ ಎಸ್.ಕೆ. ರಘು ಅವರು,ತಾ.೦೧.೦೭.೨೦೨೨ರಂದು ಮೃತಪಟ್ಟ ಯುವಕನ ಪ್ರಕರಣಕ್ಕೆ ಸಂಬAಧಿಸಿದAತೆ ಅನುಮಾನಾಸ್ಪದ ವ್ಯಕ್ತಿಗಳ ಹೆಸರನ್ನು ಪೊಲೀಸ್ ಇಲಾಖೆಗೆ ತಿಳಿಸಿದ್ದರೂ ಯಾವುದೇ ತನಿಖೆ ನಡೆಸದೇ ನಿರ್ಲಕ್ಷö್ಯ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಈ ಬಗ್ಗೆ ಠಾಣೆಗೆ ತೆರಳಿ ವಿಚಾರಿಸಿದರೆ ಎಫ್ಎಸ್ಎಲ್ ವರದಿ ಬರಲಿ ಎಂದು ಹೇಳುತ್ತಿದ್ದಾರೆ. ಘಟನೆ ನಡೆದು ಮೂರು ತಿಂಗಳಾಗುತ್ತಾ ಬಂದರೂ ಈವರೆಗೆ ಯಾವುದೇ ಪ್ರಗತಿ ಕಂಡಿಲ್ಲ. ಈ ನಡುವೆ ಕೃತ್ಯ ನಡೆದ ಆ ದಿನದಂದು ಜೊತೆಯಲ್ಲಿದ್ದ ಯುವಕರ ಪೈಕಿ ಓರ್ವ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಾನೆ. ಈತನನ್ನೂ ಸಹ ಪೊಲೀಸರು ತನಿಖೆಗೆ ಒಳಪಡಿಸಿಲ್ಲ ಎಂದು ಆರೋಪಿಸಿದರು.
ಮಕ್ಕಳಗುಡಿ ಬೆಟ್ಟದಲ್ಲಿ ಕೆಲ ಪುಂಡರು ಮದ್ಯಪಾನ, ದೂಮಪಾನ ಮಾಡಿ ಗಲಾಟೆ ಮಾಡುವುದು ಮಾಮೂಲಾಗಿದೆ. ಇಲ್ಲಿಗೆ ಸಿ.ಸಿ. ಕ್ಯಾಮೆರಾ ಅಳವಡಿಸುವಂತೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಇದರೊಂದಿಗೆ ವಾರದಲ್ಲಿ ಮರ್ನಾಲ್ಕು ದಿನ ಪೊಲೀಸ್ ಬೀಟ್ ನಡೆಸುವಂತೆ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ರಘು ಅವರು ದೂರಿದರು.
ಹತ್ಯೆಯಂತಹ ಕೃತ್ಯಗಳು ನಡೆಯುತ್ತಿರುವುದರಿಂದ ಮಕ್ಕಳಗುಡಿ ಬೆಟ್ಟ ಮಾತ್ರವಲ್ಲದೇ ಗ್ರಾಮಕ್ಕೂ ಕೆಟ್ಟ ಹೆಸರು ಬರುತ್ತಿದೆ. ಮುಂದಿನ ೧೫ ದಿನಗಳ ಒಳಗೆ ಈ ಪ್ರಕರಣದ ಬಗ್ಗೆ ತನಿಖೆ ಪೂರ್ಣಗೊಳಿಸದಿದ್ದರೆ, ತಾಕೇರಿ, ಕಿರಗಂದೂರು ಮತ್ತು ಬಿಳಿಗೇರಿ ಭಾಗದ ಗ್ರಾಮಸ್ಥರೊಡಗೂಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಹೆಚ್.ಆರ್. ಶುಭಾರಾಣಿ, ಸದಸ್ಯರಾದ ತಾರಾ ಸುಧೀರ್, ಎಂ.ಎA. ಬೆಳ್ಳಿಯಪ್ಪ, ಕಿರಗಂದೂರು ಗ್ರಾಮಾಧ್ಯಕ್ಷ ಚಿದಾನಂದ್ ಅವರುಗಳು ಉಪಸ್ಥಿತರಿದ್ದರು.