ಸೋಮವಾರಪೇಟೆ,ಸೆ.೨೭: ಪಟ್ಟಣದಲ್ಲಿ ಕಳೆದ ತಾ ೧೯ರಂದು ನಡೆದ ಸರ ಕಳ್ಳತನ ಪ್ರಕರಣದ ಆರೋಪಿಗಳು ಇಂದಿಗೂ ಪತ್ತೆಯಾಗಿಲ್ಲ. ಚಿನ್ನದ ಸರವನ್ನು ಕಳೆದುಕೊಂಡ ವೃದ್ಧೆ ಪೊಲೀಸ್ ಠಾಣೆಗೆ ಎಡತಾಕುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸದ್ಯಕ್ಕೆ ಇಲಾಖೆ ಯಶಕಂಡಿಲ್ಲ.
ಕಳೆದ ತಾ. ೧೯ರಂದು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಹೊಸಬೀಡು ಗ್ರಾಮದ ವೃದ್ದೆ ೭೦ರ ಪ್ರಾಯದ ಜಾನಕಿ ಅವರನ್ನು ಬಸ್ ಹತ್ತಿಸುವ ನೆಪದಲ್ಲಿ ಕರೆದೊಯ್ದು ನಾಜೂಕಾಗಿ ಚಿನ್ನದ ಸರ ಅಪಹರಿಸಿ ಪರಾರಿಯಾದ ಚಾಲಾಕಿ ಕಳ್ಳಿಯ ಮೂಲ ಹುಡುಕಲು ಅಪರಾಧ ಪತ್ತೆದಳದÀ ಸಿಬ್ಬಂದಿಗಳಿಗೆ ಸಾಧ್ಯವಾಗಿಲ್ಲ.
ಹೊಸಬೀಡು ಗ್ರಾಮದ ವೃದ್ಧೆ ಜಾನಕಿ ಅವರು ಮನೆಗೆ ತೆರಳಲು ತಾ. ೧೯ರಂದು ಸಂಜೆ ೪.೩೦ರ ಸುಮಾರಿಗೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಸಂದರ್ಭ ಆಗಮಿಸಿದ ಅಪರಿಚಿತ ಮಹಿಳೆಯೋರ್ವರು, ಜಾನಕಿ ಅವರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದರು. ಹೊಸಬೀಡು ಗ್ರಾಮದ ಮೂಲಕ ತೆರಳುವ ಬಸ್ ಆಗಮಿಸಿದ ಸಂದರ್ಭ, ಬಸ್ನೊಳಗೆ ಕುಳ್ಳಿರಿಸಲು ಕರೆದೊಯ್ದ ಅಪರಿಚಿತ ಮಹಿಳೆಯು ಜಾನಕಿ ಅವರ ಕೊರಳಲ್ಲಿದ್ದ ಸುಮಾರು ೧.೧೦ ಲಕ್ಷ ಮೌಲ್ಯದ ಚಿನ್ನದ ತಾಳಿ ಸಹಿತ ಸರವನ್ನು ಎಗರಿಸಿ ಪರಾರಿಯಾಗಿದ್ದಾಳೆ.
ಕ್ಷಣಕಾಲ ಏನೂ ತಿಳಿಯದಂತೆ ಮಂಕಾಗಿದ್ದ ಜಾನಕಿ ಅವರು, ನಂತರ ಎಚ್ಚೆತ್ತುಕೊಂಡಾಗ ಕುತ್ತಿಗೆಯಿಂದ ಸರ ಮಾಯವಾಗಿರುವುದು ತಿಳಿದುಬಂದಿದೆ. ಸಾರ್ವಜನಿಕರೊಂದಿಗೆ ಠಾಣೆಗೆ ತೆರಳಿ ಸರ ಕಳ್ಳತನದ ಬಗ್ಗೆ ದೂರು ನೀಡಿದ್ದು, ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಘಟನೆ ನಡೆದು ೮ ದಿನಗಳು ಕಳೆದರೂ ಕಳ್ಳರ ಸಣ್ಣ ಕುರುಹು ಸಹ ಪೊಲೀಸರಿಗೆ ಸಿಕ್ಕಿಲ್ಲ. ಸೋಮವಾರಪೇಟೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದು, ಸುತ್ತಮುತ್ತಲಿನ ಸಿ.ಸಿ. ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಇದರೊಂದಿಗೆ ಹೊರಭಾಗದಲ್ಲಿ ನಡೆದಿರುವ ಸರ ಕಳವು ಪ್ರಕರಣದ ಆರೋಪಿಗಳ ಭಾವಚಿತ್ರವನ್ನು ತರಿಸಿಕೊಂಡು ಪರಿಶೀಲಿಸುತ್ತಿದ್ದಾರೆ.
ಆದರೆ ಘಟನೆ ನಡೆದು ೮ ದಿನಗಳಾದರೂ ಈವರೆಗೆ ಆರೋಪಿಗಳ ಸುಳಿವು ಲಭ್ಯವಾಗಿಲ್ಲ. ಸೋಮವಾರಪೇಟೆ ಭಾಗದಲ್ಲಿ ಸರಗಳ್ಳರು ತಮ್ಮ ಕೈ ಚಳಕ ತೋರಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಸರಕಳ್ಳರ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.