ಸಿದ್ದಾಪುರ, ಸೆ. ೨೮: ಮಾಲೀಕನ ಎದುರಲ್ಲೇ ಹಾಡಹಗಲೇ ಹಸುವೊಂದರ ಮೇಲೆ ಹುಲಿಯು ದಾಳಿ ನಡೆಸಿ ಗಂಭೀರವಾಗಿ ಗಾಯ ಗೊಳಿಸಿದ್ದು, ಹಸು ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ಸಿದ್ದಾಪುರ ಸಮೀಪದ ಅವರೆಗುಂದ ಗ್ರಾಮದಲ್ಲಿ ನಡೆದಿದೆ.

ಕರಡಿಗೋಡು ಗ್ರಾಮದ ಅವರೆಗುಂದ ನಿವಾಸಿ ಚಂದ್ರ ಎಂಬವರಿಗೆ ಸೇರಿದ ಹಸುವನ್ನು ಪೂರ್ವಾಹ್ನ ೧೧ ಗಂಟೆಯ ಸಮಯ ಮನೆಯ ಸಮೀಪದಲ್ಲಿ ಮೇಯಲು ಬಿಟ್ಟಿದ್ದರು. ಇದರ ಸಮೀಪದಲ್ಲೇ ಚಂದ್ರುರವರು ನಿಂತಿದ್ದರು. ದಿಢೀರನೆ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿದೆ. ಹಠಾತ್ತನೆ ದಾಳಿ ನಡೆಸಿದ ಹುಲಿಯನ್ನು ಕಂಡ ಚಂದ್ರ ಭಯಗೊಂಡು ಕಿರುಚಿದಾಗ ಹುಲಿಯು ಅಲ್ಲಿಂದ ಪರಾರಿಯಾಗಿದೆ. ಹುಲಿಯು ದಾಳಿ ನಡೆಸಿದ ಪರಿಣಾಮ ಹಸುವಿನ ಕಾಲಿನ ಭಾಗಕ್ಕೆ ಗಂಭೀರ ಗಾಯವಾಗಿರುತ್ತದೆ. ಅದೃಷ್ಟವಶಾತ್ ಹಸುವಿನ ಮಾಲೀಕ ಚಂದ್ರ ಹಾಗೂ ಹಸು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಹಸುವಿನ ಮಾಲೀಕ ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಇವರಿಗೆ ಸೇರಿದ ಎರಡು ಜಾನುವಾರುಗಳನ್ನು ಹುಲಿ ಕೊಂದು ಹಾಕಿತ್ತು. ಗಾಯಗೊಂಡ ಹಸುವಿಗೆ ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ. ಇತ್ತೀಚೆಗೆ ಮಾಲ್ದಾರೆ ಹಾಗೂ ಬಾಡಗ ಬಾಣಂಗಾಲ ಗ್ರಾಮದಲ್ಲಿ ಹುಲಿಯೊಂದು ಬೀಡುಬಿಟ್ಟು ಜಾನುವಾರುಗಳನ್ನು ಕೊಂದು ಹಾಕುತ್ತಿದೆ. ಇದನ್ನು ಕಳೆದ ಒಂದು ವಾರಗಳ ಹಿಂದೆ ಅರಣ್ಯ ಇಲಾಖಾಧಿಕಾರಿಗಳು ಹಗಲಿರುಳು ಶ್ರಮಪಟ್ಟು ಸೆರೆಹಿಡಿದು ಬನ್ನೇರು ಘಟ್ಟಕ್ಕೆ ಸಾಗಿಸಿದರು. ಈ ನಿಟ್ಟಿನಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮತ್ತೊಂದು ಹುಲಿಯು ಪ್ರತ್ಯಕ್ಷಗೊಂಡಿದ್ದು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

-ವರದಿ: ವಾಸು.