ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ. ಲೆ.ಜ. ಅನಿಲ್ ಚೌಹಾಣ್
ನವದೆಹಲಿ, ಸೆ. ೨೮: ಜನರಲ್ ಬಿಪಿನ್ ರಾವತ್ ಅವರ ನಿಧನದಿಂದ ತೆರವಾಗಿದ್ದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆಗೆ ಕೇಂದ್ರ ಸರ್ಕಾರ ತಾ. ೨೮ ರಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಡಿಜಿಎಂಒ (ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದು, ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡರ್-ಇನ್-ಚೀಫ್ ಹುದ್ದೆಯಲ್ಲಿ ನಿವೃತ್ತರಾಗಿದ್ದರು. ಸೇನಾ ಭಾಷೆಯಲ್ಲಿ ಹೇಳಬೇಕೆಂದರೆ ಅವರು ಈಸ್ಟರ್ನ್ ಆರ್ಮಿ ಕಮಾಂಡರ್ ಆಗಿದ್ದವರು. ಸೇನೆಯ ಎರಡು ಅತ್ಯಂತ ಸೂಕ್ಷö್ಮ ಕಮಾಂಡ್‌ಗಳ ಪೈಕಿ ಈಸ್ಟರ್ನ್ ಆರ್ಮಿಯೂ ಒಂದಾಗಿದೆ. ಅನಿಲ್ ಚೌಹಾಣ್ ಅವರು ೨೦೨೧ ರ ಮೇ ೩೧ ರಂದು ನಿವೃತ್ತರಾಗಿದ್ದರು.
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ
ನವದೆಹಲಿ, ಸೆ. ೨೮: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಶೇ. ೪ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕುರಿತು ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಹಾಗೂ ತುಟ್ಟಿ ಪರಿಹಾರವನ್ನು ಶೇ. ೪ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದು ೨೦೨೨ರ ಜುಲೈ ೧ರಿಂದಲೇ ಪೂರ್ವಾನ್ವಯವಾಗಲಿದೆ ಎಂದು ಹೇಳಿದ್ದಾರೆ. ಇದರಿಂದ ಸುಮಾರು ೫೦ ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ೬೧ ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಕ್ರಮವಾಗಿ ರೂ. ೧೨,೮೫೨.೫೬ ಕೋಟಿ ಹಾಗೂ ರೂ. ೮,೫೬೮.೩೬ ಕೋಟಿ ಹೊರೆಯಾಗಲಿದೆ. ಈ ಹೆಚ್ಚಳದಿಂದಾಗಿ ಶೇ. ೩೪ರಷ್ಟಿದ್ದ ತುಟ್ಟಿಭತ್ಯೆ ಈಗ ಶೇ. ೩೮ಕ್ಕೆ ಏರಿಕೆಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಅಸ್ತಿತ್ವದಲ್ಲಿರುವ ೫೦ ಲಕ್ಷ ಕೇಂದ್ರ ನೌಕರರು ಮತ್ತು ೬೨ ಲಕ್ಷ ಪಿಂಚಣಿದಾರರಿಗೆ ನೇರ ಲಾಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ನೋಟು ಅಮಾನ್ಯಕರಣ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ
ನವದೆಹಲಿ, ಸೆ. ೨೮: ೫೦೦ ಮತ್ತು ೧೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದ ಕೇಂದ್ರದ ೨೦೧೬ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ ೧೨ ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಸಾಂವಿಧಾನಿಕ ಪೀಠ, ಅರ್ಜಿಗಳು ಶೈಕ್ಷಣಿಕ ವಿಚಾರಕ್ಕೆ ಸಂಬAಧಿಸಿದ್ದವುಗಳಾದರೆ ಅವುಗಳನ್ನು ಪರಿಗಣಿಸುವುದಾಗಿ ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ, ವಿ. ರಾಮಸುಬ್ರಮಣಿಯನ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠವು ೨೦೧೬ರ ನವೆಂಬರ್ ೮ ರಂದು ಕೇಂದ್ರದ ನೋಟು ಅಮಾನ್ಯಕರಣದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ೫೮ ಅರ್ಜಿಗಳ ವಿಚಾರಣೆ ನಡೆಸಲಿದೆ
ತೆರಿದಿದ್ದ ಚರಂಡಿಗೆ ಬಿದ್ದ ವ್ಯಕ್ತಿ ದುರ್ಮರಣ
ಬೆಂಗಳೂರು, ಸೆ. ೨೮: ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ತೆರೆದಿದ್ದ ಚರಂಡಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಚಿತ್ರದುರ್ಗ ಮೂಲದ ವೆಂಕಟೇಶ್ ಕೆ. (೩೧) ಎಂದು ಗುರುತಿಸಲಾಗಿದ್ದು, ನೆಲಗದರನಹಳ್ಳಿಯ ನಿರ್ಮಾಣ ಸ್ಥಳದಲ್ಲಿ ಟ್ರ‍್ಯಾಕ್ಟರ್ ಚಾಲಕರಾಗಿದ್ದರು. ಪೀಣ್ಯದ ಟಿ. ದಾಸರಹಳ್ಳಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ತೆರೆದ ಚರಂಡಿಗೆ ಬಿದ್ದಿದ್ದಾರೆ. ಈ ವೇಳೆ ವೆಂಕಟೇಶ್ ಅವರನ್ನು ದಾರಿಹೋಕರು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಈ ಸಂಬAಧ ಸಹಾಯಕ ಇಂಜಿನಿಯರ್ ಮತ್ತು ಇತರ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು, ಮೂರು ತಿಂಗಳ ಹಿಂದೆ ಚರಂಡಿಯ ಹೂಳು ತೆಗೆಯಲು ಸ್ಲ್ಯಾಬ್‌ಗಳನ್ನು ತೆಗೆಯಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡ ನಂತರ ಚರಂಡಿ ಮುಚ್ಚಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟçಪತಿ ದ್ರೌಪದಿ ಮುರ್ಮುಗೆ ಬೀಳ್ಕೊಡುಗೆ
ಬೆಂಗಳೂರು, ಸೆ. ೨೮: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಕಳೆದ ಮೂರು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದ ರಾಷ್ಟçಪತಿ ದ್ರೌಪದಿ ಮುರ್ಮು ಅವರನ್ನು ಇಂದು ಬೆಳಿಗ್ಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು. ಮೈಸೂರು ದಸರಾ, ಧಾರಾವಾಡದ ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಇನ್ಫಾರ್ಮೇಶನ್ ಅಂಡ್ ಟೆಕ್ನಾಲಜಿಯನ್ನು ಉದ್ಘಾಟಿಸಿದರು ಹಾಗೂ ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ ಸ್ವೀಕರಿಸಿದರು.
ಉಚಿತ ಪಡಿತರ ಯೋಜನೆ ವಿಸ್ತರಣೆ
ನವದೆಹಲಿ, ಸೆ. ೨೮: ನವರಾತ್ರಿ ಹಬ್ಬಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಉಚಿತ ಪಡಿತರ ಯೋಜನೆಯನ್ನು ಕೇಂದ್ರ ಸರ್ಕಾರ ಬುಧವಾರ ಮೂರು ತಿಂಗಳವರೆಗೆ ವಿಸ್ತರಿಸಿದೆ. ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಮ್ಮೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಇನ್ನೂ ೩ ತಿಂಗಳವರೆಗೆ ವಿಸ್ತರಿಸಲಾಗಿದೆ. ಈಗ ಈ ಯೋಜನೆಯಡಿ ಪಡಿತರ ಚೀಟಿದಾರರು ಡಿಸೆಂಬರ್‌ವರೆಗೆ ಸರ್ಕಾರದಿಂದ ಉಚಿತ ಪಡಿತರ ಪ್ರಯೋಜನ ಪಡೆಯಲಿದ್ದಾರೆ. ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯೋಜನೆಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ. ರೂ. ೪೪,೭೦೦ ಕೋಟಿ ವೆಚ್ಚದಲ್ಲಿ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಲಾಗುವುದು. ಶುಕ್ರವಾರದಂದು ಕೊನೆಗೊಳ್ಳಲಿರುವ ೮೦ ಕೋಟಿ ಬಡವರಿಗೆ ಪ್ರತಿ ತಿಂಗಳು ೫ ಕೆ.ಜಿ. ಗೋಧಿ ಮತ್ತು ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆಯು ಈಗ ಡಿಸೆಂಬರ್ ೩೧, ೨೦೨೨ ರವರೆಗೆ ಜಾರಿಯಲ್ಲಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ್ ಸಿಂಗ್ ನಾಮಪತ್ರ
ನವದೆಹಲಿ, ಸೆ. ೨೮: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆ ರಂಗೇರಿದ್ದು, ಚುನಾವಣಾ ಕಣಕ್ಕೆ ಆ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಧುಮುಕಿದ್ದು, ಶೀಘ್ರದಲ್ಲೇ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಮುಂಬರುವ ಅಕ್ಟೋಬರ್ ೧೭ ರಂದು ಚುನಾವಣೆ ನಡೆಯಲಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಅವರು ಬುಧವಾರ ರಾತ್ರಿ ರಾಷ್ಟç ರಾಜಧಾನಿಗೆ ಆಗಮಿಸುವ ನಿರೀಕ್ಷೆಯಿದ್ದು, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಅವರ ವೈಯಕ್ತಿಕ ನಿರ್ಧಾರ ಎಂದು ಸಿಂಗ್ ಅವರ ನಿಕಟ ಮೂಲಗಳು ತಿಳಿಸಿದ್ದು, ಗಾಂಧಿ ಕುಟುಂಬದ ಯಾರೊಬ್ಬ ಸದಸ್ಯರೂ ಅವರಿಗೆ ಯಾವುದೇ ರೀತಿಯ ಸಲಹೆ ನೀಡಿಲ್ಲ ಎಂದೂ ತಿಳಿಸಿವೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ತಾ. ೩೦ ರೊಳಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಆರಂಭಿಕ ಯೋಜನೆಯಂತೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪಕ್ಷದ ಉನ್ನತ ಹುದ್ದೆಗೆ ಸ್ಪರ್ಧಿಸುವುದಾಗಿತ್ತು. ಆದರೆ ರಾಜಸ್ಥಾನದಲ್ಲಿ ಉಲ್ಬಣಗೊಂಡಿರುವ ದಿಢೀರ್ ರಾಜಕೀಯ ಬಿಕ್ಕಟ್ಟು ಅವರು ಸ್ಪರ್ಧೆಯಿಂದ ದೂರ ಉಳಿಯುವಂತಾಗಿದೆ. ಆದಾಗ್ಯೂ ರಾಜಸ್ಥಾನದಲ್ಲಿ ಹಿರಿಯ ನಾಯಕ ಕಮಲ್ ನಾಥ್ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆಗಳು ನಡೆಯುತ್ತಿದ್ದು, ಈಗಲೂ ಗೆಹ್ಲೂಟ್ ಪಕ್ಷದ ಅಧ್ಯಕ್ಷ ಚುನಾವಣಾ ರೇಸ್‌ನಿಂದ ಹೊರಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.