ಸೋಮವಾರಪೇಟೆ, ಸೆ. ೨೬: ಇಲ್ಲಿನ ಲಯನ್ಸ್ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ಗೆ ವಲಯ ಅಧ್ಯಕ್ಷರ ಭೇಟಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ವಲಯಾಧ್ಯಕ್ಷ ಎಂ.ಎ. ಹರೀಶ್ ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಲಯನ್ಸ್ ಸಂಸ್ಥೆಯವರು ಸಾರ್ವಜನಿಕರ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕಿ ಭಾಗೀರಥಿ ಹಾಗೂ ಮಸಗೋಡು ಚೆನ್ನಮ್ಮ ಶಾಲೆಯ ಮುಖ್ಯ ಶಿಕ್ಷಕ ಸಂತೊಷ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಸಿ.ಕೆ. ರೋಹಿತ್ ವಹಿಸಿದ್ದರು. ಕಾರ್ಯದರ್ಶಿ ಕೆ.ಎನ್. ತೇಜಸ್ವಿ, ಖಜಾಂಚಿ ಜಿ.ಟಿ. ಯೋಗೇಂದ್ರ, ಪದಾಧಿಕಾರಿಗಳಾದ ಎಸ್.ಎನ್. ಯೋಗೇಶ್, ಸಿ.ಕೆ. ಮಲ್ಲಪ್ಪ, ಜೆ.ಸಿ. ಶೇಖರ್, ಎಸ್.ಬಿ. ಲೀಲಾರಾಮ್, ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಮಂಜುನಾಥ್ ಚೌಟ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭ ವಲಯಾಧ್ಯಕ್ಷರಾಗಿ ಆಯ್ಕೆಯಾದ ಎಂ.ಎ. ಹರೀಶ್ ಅವರನ್ನು ಸನ್ಮಾನಿಸಲಾಯಿತು.