ಮಡಿಕೇರಿ, ಸೆ. ೨೬: ಮಡಿಕೇರಿ ನಗರ ವ್ಯಾಪ್ತಿಯ ವಿದ್ಯಾನಗರದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿರುವ ಜಾಗವನ್ನು ತೆರವುಗೊಳಿಸುವದ ರೊಂದಿಗೆ ಹಕ್ಕುಪತ್ರವನ್ನು ರದ್ದುಗೊಳಿಸುವಂತೆ ಮಡಿಕೇರಿ ತಹಶೀಲ್ದಾರರು ನಗರಸಭೆಗೆ ಸೂಚನೆ ನೀಡಿದ್ದಾರೆ.
ಮಡಿಕೇರಿ ನಗರಸಭಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಕೆ.ಶಿವಕುಮಾರ್ ಹಾಗೂ ಹೆಚ್.ಆರ್.ಮರಿಸಿದ್ಧ ಎಂಬವರುಗಳು ತಮಗೆ ಹಕ್ಕುಪತ್ರ ಇದೆ ಎಂದು ನಿವೇಶನಕ್ಕೆ ಬೇಲಿ ಹಾಕಿಕೊಂಡಿದ್ದರು. ಈ ಹಕ್ಕುಪತ್ರದ ಆಧಾರದಲ್ಲಿ ನಗರಸಭೆಯವರು ನಮೂನೆ-೩ ಕೂಡ ನೀಡಿದ್ದರು. ಆದರೆ, ಶಿವಕುಮಾರ್ ಮಡಿಕೇರಿ ನಿವಾಸಿ ಅಲ್ಲವೆಂದು, ಮರಿಸಿದ್ದ ಅವರಿಗೆ ಅವರ ಪತ್ನಿಯ ಹೆಸರಿನಲ್ಲಿ ಈಗಾಗಲೇ ಹಕ್ಕುಪತ್ರದೊಂದಿಗೆ ಮನೆ ಕೂಡ ಇರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರರು ಪರಿಶೀಲನೆ ಮಾಡಿ ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ತಹಶೀಲ್ದಾರರು ನೀಡಿರುವ ವರದಿಯ ಸಾರಾಂಶ ಇಂತಿದೆ:
ನಗರಸಭೆ ಆಯುಕ್ತರು ಹಾಗೂ ಸದಸ್ಯೆ ಚಿತ್ರಾವತಿ ಅವರ ಅರ್ಜಿಯ ಆಧಾರದಲ್ಲಿ ಶಿವಕುಮಾರ್ ಹಾಗೂ ಮರಿಸಿದ್ಧ ಅವರುಗಳಿಗೆ ಪಟ್ಟಾ ನಂ.೮೮೧/೯೦-೯೧ ಮತ್ತು ಪಟ್ಟಾ ನಂ.೮೯೩/೯೦-೯೧ ನಿವೇಶನ ಹಕ್ಕು ಪತ್ರದ ನೈಜತೆಯ ಬಗ್ಗೆ ಕಚೇರಿಯ ಪಟ್ಟಾ ವಿತರಣೆ
(ಮೊದಲ ಪುಟದಿಂದ) ವಹಿಯಲ್ಲಿ ಪರಿಶೀಲಿಸಲಾಗಿ ನಿವೇಶನ ಮಂಜೂರಾಗಿರುವ ಬಗ್ಗೆ ಯಾವದೇ ದಾಖಲಾತಿಗಳು ಲಭ್ಯವಾಗಿರುವದಿಲ್ಲ. ೧೯೯೦-೯೧ನೇ ಸಾಲಿನ ಪಟ್ಟಾ ವಿತರಣಾ ವಹಿಯಲ್ಲಿ ಪಟ್ಟಾ ಸಂಖ್ಯೆ ೬೦೭ರವರೆಗಿನ ಕ್ರಮಾಂಕವನ್ನು ನೀಡಿ ಹಕ್ಕು ಪತ್ರಗಳನ್ನು ಮಂಜೂರು ಆಗಿರುವದು ಕಂಡು ಬಂದಿರುತ್ತದೆ. ನಗರಸಭೆ ಆಯುಕ್ತರ ಪತ್ರದಲ್ಲಿ ವಿವರಿಸಿರುವ ಹಕ್ಕು ಪತ್ರಗಳು ವಿತರಣಾ ವಹಿಯಲ್ಲಿ ದಾಖಲೆ ಇಲ್ಲದಿರುವದರಿಂದ ದೃಢೀಕೃತ ಹಕ್ಕು ಪತ್ರಗಳು ಅಸಿಂಧು ಎಂದು ಪರಿಗಣಿಸಬಹುದು ಎಂಬ ಬಗ್ಗೆ ಉಲ್ಲೇಖ ೨ರಲ್ಲಿ ವರದಿ ನೀಡಲಾಗಿರುತ್ತದೆ.
ಅಲ್ಲದೆ, ನಗರಸಭಾ ಸದಸ್ಯೆ ಚಿತ್ರಾವತಿ ಅವರು ಮರಿಸಿದ್ಧ ಹಾಗೂ ಶಿವಕುಮಾರ್ ಅವರುಗಳ ಒತ್ತುವರಿಯನ್ನು ತೆರವು ಮಾಡಲು ಕೋರಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ನಗರ ಸಭಾ ಸಿಬ್ಬಂದಿಯೊAದಿಗೆ ಸಮನ್ವಯ ಸಾಧಿಸಿ ದಿನಾಂಕ ನಿಗದಿಪಡಿಸಿ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವು ಮಾಡಿ, ಮಹಜರು ಹಾಗೂ ಭಾವಚಿತ್ರದೊಂದಿಗೆ ವರದಿ ನೀಡುವಂತೆ ತಿಳಿಸಿದೆ ಹಾಗೂ ಹಕ್ಕು ಪತ್ರವನ್ನು ಮುಟ್ಟುಗೋಲು ಹಾಕಿಕೊಂಡು ಕಚೇರಿಗೆ ಹಾಜರುಪಡಿಸುವಂತೆ ಸೂಚಿಸಲಾಗಿದೆ. ಜಾಗ ಒತ್ತುವರಿಯಾಗಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡಿತ್ತು.