ಭಾಗಮAಡಲ, ಸೆ. ೨೬: ತಲಕಾವೇರಿಗೆ ಮದ್ಯ ಸೇವಿಸಿ ಬಂದ ವ್ಯಕ್ತಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಸಿದ ಘಟನೆ ತಾ. ೨೫ ರಂದು ನಡೆದಿದೆ. ಬೆಂಗಳೂರಿನ ವ್ಯಕ್ತಿಯೋರ್ವ ಪತ್ನಿ ಸಮೇತ ತಲಕಾವೇರಿಗೆ ಬಂದಿದ್ದು, ತಲಕಾವೇರಿಗೆ ತೆರಳುವ ದಾರಿಯ ಮಧ್ಯೆ ಮದ್ಯ ಸೇವಿಸಿದನ್ನು ಸ್ಥಳೀಯ ಆಟೋ ಚಾಲಕ ಕಂಡು, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಮದ್ಯ ಸೇವಿಸಿದ ವ್ಯಕ್ತಿಯನ್ನು ತಡೆದ ಪೊಲೀಸರು ಪ್ರಶ್ನಿಸಿದ್ದು ಮದ್ಯ ಸೇವಿಸಿದರೆ ತಪ್ಪೇನು ಎಂದು ಆತ ಹಾಗೂ ಆತನ ಪತ್ನಿ ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದು, ಪೊಲೀಸರು ಆತನಿಗೆ ಕ್ಷೇತ್ರಕ್ಕೆ ಮದ್ಯ ಸೇವಿಸಿ ಪ್ರವೇಶಿಸಬಾರದು ಎಂದು ತಿಳಿಹೇಳಿ ಇದೇ ಸಂದರ್ಭ ಅಲ್ಲಿದ್ದ ಸ್ಥಳೀಯರು ಆತನನ್ನು ಪ್ರಶ್ನಿಸಿ ನಂತರ ಪೊಲೀಸರು ದಂಡ ವಿಧಿಸಿದ್ದಾರೆ.

ತಲಕಾವೇರಿ ಕ್ಷೇತ್ರಕ್ಕೆ ಮದ್ಯ ಹಾಗೂ ಮಾಂಸವನ್ನೂ ವಾಹನದಲ್ಲಿ ಒಂದೆರಡು ಬಾರಿ ತೆಗೆದುಕೊಂಡು ಹೋದ ಪ್ರಕರಣ ಈ ಹಿಂದೆ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಬಳಿಕ ದಂಡ ವಿಧಿಸಲಾಗಿತ್ತು. ತಲಕಾವೇರಿಗೆ ತೆರಳುವ ವಾಹನಗಳನ್ನು ಪರಿಶೀಲನೆ ಮಾಡಬೇಕು. ಹೊರಗಿನಿಂದ ಪ್ರವಾಸಿಗರಾಗಿ ಬರುವ ಭಕ್ತರನ್ನು ತಪಾಸಣೆ ಮಾಡಿ ಕ್ಷೇತ್ರ ಅಪವಿತ್ರಗೊಳಿಸುವುದನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

-ಸುನಿಲ್