]ಸುಂಟಿಕೊಪ್ಪ, ಸೆ. ೨೬: ಸ್ವಸ್ಥ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ ಯೋಜನೆಯಡಿಯಲ್ಲಿ ಸ್ವಸ್ಥ ಸಂಸ್ಥೆಯಲ್ಲಿ ಜೇನು ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಆರತಿ ಸೋಮಯ್ಯ ವಹಿಸಿ ಮಾತನಾಡಿ, ವಿಶೇಷ ಚೇತನರನ್ನು ಮತ್ತು ಪೋಷಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಜೇನು ಕೃಷಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜೇನು ಕೃಷಿಯಲ್ಲಿ ವಿಶೇಷ ಚೇತನರು ತೊಡಗಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಸಹಕಾರ ನೀಡಿ ಪ್ರೋತ್ಸಾಹಿಸುವುದರ ಮೂಲಕ ಆರ್ಥಿಕವಾಗಿ ಬೆಳೆಯಬೇಕೆಂದು ತಿಳಿಸಿದರು. ಸೋಮವಾರಪೇಟೆ ತೋಟಗಾರಿಕೆ ಇಲಾಖೆ ಜೇನು ಕೃಷಿ ಸಹಾಯಕರಾದ ಎಸ್.ಎಸ್. ರಾಜು ಅವರು ಮಾತನಾಡಿ, ಇಲಾಖೆ ವತಿಯಿಂದ ನೀಡುವ ಸಹಾಯಧನ ಮತ್ತು ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಸೋಮವಾರಪೇಟೆ ಪ್ರಗತಿಪರ ಕೃಷಿಕರಾದ ಎಸ್.ಎಸ್. ರಾಜು ಅವರು ಸಂಪನ್ಮೂಲ ವ್ಯಕ್ತಿಯಾಗಿ ಜೇನು ಕೃಷಿ ಮಾಡುವ ಬಗ್ಗೆ ಮಾಹಿತಿ ನೀಡಿ ಪ್ರಾಯೋಗಿಕವಾಗಿ ಜೇನು ಕೀಟಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ ೨೦ಕ್ಕೂ ಹೆಚ್ಚು ಜೇನು ಕೃಷಿ ಆಸಕ್ತರು ಭಾಗವಹಿಸಿ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡರು. ಕಾರ್ಯಕ್ರಮದಲ್ಲಿ ವಿಶೇಷ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿಶೇಷ ಶಿಕ್ಷಕಿಯಾದ ಲತಾ ಸ್ವಾಗತಿಸಿ, ಶ್ವೇತ ನಿರೂಪಿಸಿ, ಶಿಕ್ಷಕ ಮಂಜುನಾಥ ವಂದಿಸಿದರು.