ಕೂಡಿಗೆ, ಸೆ. ೨೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೨-೨೩ ನೇ ಸಾಲಿನ ಗ್ರಾಮಸಭೆಯು ಬ್ಯಾಡಗೊಟ್ಟ ಗ್ರಾಮದ ಅಂಗನವಾಡಿ ಕೇಂದ್ರದ ಸಭಾಂಗಣದಲ್ಲಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಕೂಡಿಗೆ ಸರ್ಕಲ್‌ನಲ್ಲಿ ಶೌಚಾಲಯದ ಕೊರತೆಯಿಂದಾಗಿ ಹಾಸನ ಮತ್ತು ಸೋಮವಾರಪೇಟೆ, ಸಕಲೇಶಪುರ ಕಡೆಗೆ ತೆರಳುವ ನೂರಾರು ಮಂದಿಗೆ ತೊಂದರೆಗಳು ಅಗುತ್ತಿದೆ. ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಸಭೆಯಲ್ಲಿದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಈಗಿರುವ ಜಾಗದ ಬದಲು ಬೇರೆ ಜಾಗದಲ್ಲಿ ಸಮರ್ಪಕವಾದ ನೂತನ ಮಾದರಿಯ ಶೌಚಾಲಯವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕೆಂದು ಸ್ಥಳೀಯರಾದ ನಾಗರಾಜ್, ಮೋಹನ ಗಣೇಶ್, ವೆಂಕಟೇಶ, ಗೋಪಾಲ್ ಸೇರಿದಂತೆ ಅನೇಕರು ಸಭೆಯಲ್ಲಿ ಒತ್ತಾಯ ಮಾಡಿದರು.

ಹುದುಗೂರು ಗ್ರಾಮದಲ್ಲಿರುವ ಪ್ರಾಥಮಿಕ ಪಶು ಆರೋಗ್ಯ ಕೇಂದ್ರಕ್ಕೆ ನೌಕರರ ನೇಮಕ, ಮತ್ತು ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಹುದುಗೂರು ಗ್ರಾಮ ನಿವಾಸಿಗಳಾದ ಐ.ಎಸ್. ಗಣೇಶ್, ಕುಮಾರ್ ಮಂಜುನಾಥ ಸೇರಿದಂತೆ ಅನೇಕ ರೈತರು ಒತ್ತಾಯ ಮಾಡಿದರು.

ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಸಮರ್ಪಕವಾದ ಶೌಚಾಲಯದ ಗುಂಡಿಗಳು ನಿರ್ಮಾಣವಾಗಿವೆ. ಅವುಗಳು ಭರ್ತಿಯಾಗಿ ಸಮೀಪದಲ್ಲಿರುವ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಕಕ್ಕೆ ಹೊಳೆಯ ಉಪ ನಾಲೆಯು ಹರಿಯುತ್ತಿದ್ದು, ಈ ಕಲ್ಮಶ ನೀರು ಹರಿದು ಕೆಳ ಭಾಗದಲ್ಲಿ ವಾಸಿಸುವ ೧೦ಕ್ಕಿಂತ ಹೆಚ್ಚು ಕುಟುಂಬದವರಿಗೆ ಭಾರೀ ತೊಂದರೆಗಳು ಅಗುತ್ತಿವೆ ಎಂದು ಗ್ರಾಮಸ್ಥರಾದ ಅಣ್ಣಯ್ಯ, ಗಣೇಶ್, ಅಜೇಯ. ವಿಜೇತ, ರಾಯಣ್ಣ, ರಾಜಣ್ಣ, ಕುಮಾರ್ ಸೇರಿದಂತೆ ಹಾಡಿ ಅನೇಕ ಮಂದಿ ಸಭೆಯಲ್ಲಿ ಮಾಹಿತಿಯಿತ್ತರು.

ಇದರ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ಮಾಡಬೇಕೆಂದು ಕೆಲ ಗ್ರಾಮಸ್ಥರು ಒತ್ತಾಯಿಸಿದರೂ ಇದುವರೆಗೂ ಈ ಕೇಂದ್ರವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿಲ್ಲ. ಆದರೂ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಅಭಿವೃದ್ಧಿ ಅಧಿಕಾರಿ ಎಂ.ಕೆ. ಆಯಿಷಾ ಸಮಜಾಯಿಷಿಕೆ ಕೊಟ್ಟರು.

ಸಭೆಯಲ್ಲಿ ವಿವಿಧ ವಾರ್ಡ್ಗಳ ರಸ್ತೆಗಳ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಆರೋಗ್ಯ ಇಲಾಖೆಯ ವತಿಯಿಂದ ಕಾರ್ಯಕರ್ತೆಯ ನೇಮಕಕ್ಕೆ ಒತ್ತಾಯ, ಪುನರ್ವಸತಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ವಿತರಣೆ ಮಾಡುವ ವಸ್ತುಗಳ ಸಮರ್ಪಕ ವಿತರಣೆ ಮಾಡಬೇಕೆಂದು ಅಲ್ಲಿನ ನಿವಾಸಿಗಳ ಒತ್ತಾಯ, ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.

ಸಭೆಯಲ್ಲಿ ವಾರ್ಡ್ ಸಭೆಯ ವರದಿಯನ್ನು ಮಂಡಿಸಲಾಯಿತು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು. ಅಲ್ಲದೆ ಉದ್ಯೋಗ ಖಾತರಿ ಮತ್ತು ಇತರ ಯೋಜನೆಗಳ ಕಾಮಗಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಅರಣ್ಯ ಇಲಾಖೆ, ಶಿಕ್ಷಣ, ಆರೋಗ್ಯ, ಆಹಾರ ಇಲಾಖೆ ಪಶುಪಾಲನೆ ಇಲಾಖೆ, ಅಬಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಂದಾಯ, ನೀರಾವರಿ ಇಲಾಖೆ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬAಧಿಸಿದ ಅಧಿಕಾರಿಗಳು ಹಾಜರಿದ್ದರು. ಸಭೆಯ ನೋಡಲ್ ಅಧಿಕಾರಿಯಾಗಿ ಕೂಡುಮಂಗಳೂರು ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಆಗಮಿಸಿದರು, ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ ಸೇರಿದಂತೆ ಸದಸ್ಯರು, ಕಾರ್ಯದರ್ಶಿ ಪುನಿತ್ ಹಾಜರಿದ್ದರು.