ಕುಶಾಲನಗರ, ಸೆ.೨೬: ಕುಶಾಲನಗರ ಲಯನ್ಸ್ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮ ನಡೆಯಿತು.
ಸಮಾರಂಭ ಉದ್ಘಾಟಿಸಿದ ವಲಯ ಅಧ್ಯಕ್ಷ ಎಲ್.ಮೋಹನ್ ಕುಮಾರ್ ಮಾತನಾಡಿ, ಲಯನ್ಸ್ ಸಂಸ್ಥೆಯು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ರತಿಯೊಬ್ಬ ಸದಸ್ಯರು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು.
ಕ್ಲಬ್ ಮೂಲಕ ವಿಶೇಷ ಕಾರ್ಯಕ್ರಮ, ಚಟುವಟಿಕೆಗಳನ್ನು ಹಮ್ಮಿಕೊಂಡು ಇತರ ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಹಿರಿಯ ನಿವೃತ್ತ ಶಿಕ್ಷಕ ನಜೀರ್ ಅಹಮ್ಮದ್ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಲೀಲಾವತಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ನಜೀರ್ ಅಹಮ್ಮದ್, ಪ್ರತಿಯೊಬ್ಬರು ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆಯೊಂದಿಗೆ ಜೀವನ ನಡೆಸಬೇಕು ಎಂದರು. ಗುರುಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಸಮಾಜದ ಏಳಿಗೆಗೆ ಶಿಕ್ಷಕ ವೃಂದದ ಕೊಡುಗೆ ಅಪಾರವಾಗಿದೆ ಎಂದರು. ಕುಶಾಲನಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಎಸ್.ಚಿಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಂಸ್ಥೆಯ ಪ್ರಾಂತೀಯ ಮಾರ್ಗದರ್ಶಕ ನವೀನ್ ಅಂಬೆಕಲ್ಲು, ಕುಶಾಲನಗರ ಲಯನ್ಸ್ ಕಾರ್ಯದರ್ಶಿ ಸುಮನ್ ಬಾಲಚಂದ್ರ, ಖಜಾಂಚಿ ಕುಲ್ಲಚ್ಚನ ಹೇಮಂತ್, ಕವಿತಾ ಮೋಹನ್, ಮಾಜಿ ಅಧ್ಯಕ್ಷ ಕೊಡಗನ ಹರ್ಷ, ಸತೀಶ್ ಕುಮಾರ್, ಪ್ರಮುಖರಾದ ಪೊನ್ನಚ್ಚನ ಮೋಹನ್, ಪಿರಿಯಾಪಟ್ಟಣ ಲಯನ್ಸ್ ಅಧ್ಯಕ್ಷ ಮಹದೇವಪ್ಪ ಮಡಿಕೇರಿ, ಸುಂಟಿಕೊಪ್ಪ, ಕೊಪ್ಪ, ಬೆಟ್ಟದಪುರ, ಸೋಮವಾರಪೇಟೆ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಪಾಲ್ಗೊಂಡಿ ದ್ದರು.