ಮಡಿಕೇರಿ, ಸೆ.೨೬: ಐತಿಹಾಸಿಕ ಹಿನ್ನೆಲೆಯಿರುವ ನಾಡ ಹಬ್ಬ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮಗಳಿಗೆ ತಾ.೨೭ರಿಂದ(ಇAದು) ಚಾಲನೆ ದೊರಕಲಿದೆ ಎಂದು ಮಡಿಕೇರಿ ದಸರಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ೧೫೫ ವರ್ಷಗಳ ಇತಿಹಾಸವಿರುವ ದಸರಾ ಹಬ್ಬವನ್ನು ಇತ್ತೀಚಿನ ವರ್ಷಗಳಿಂದ ಸರಕಾರದ ಅನುದಾನದೊಂದಿಗೆ ಜನೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನಾಲ್ಕು ಶಕ್ತಿ ದೇವತೆಗಳ ಕರಗ ಮಹೋತ್ಸವದೊಂದಿಗೆ ನಾಡಹಬ್ಬಕ್ಕೆ ಚಾಲನೆ ದೊರಕಲಿದ್ದು, ಒಂಭತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ನಡೆಯಲಿದೆ. ಇದರೊಂದಿಗೆ ಯುವ ದಸರಾ, ಮಕ್ಕಳ ದಸರಾ, ಜಾನಪದ ದಸರಾ, ಮಹಿಳಾ ದಸರಾ, ಕ್ರೀಡೆ, ಕವಿಗೋಷ್ಠಿಗಳು ದಸರಾಗೆ ವಿಶೇಷ ಮೆರುಗು ನೀಡಲಿವೆ ಎಂದು ತಿಳಿಸಿದರು.
ಗುಂಡಿ ಮುಚ್ಚುವ ಕಾರ್ಯ
ಮಡಿಕೇರಿ ನಗರದ ರಸ್ತೆಗಳ ದುರಸ್ತಿ ಹಾಗೂ ಕಟ್ಟಡಗಳಿಗೆ ಬಣ್ಣ ಬಳಿಯುವ ಕಾರ್ಯಕ್ಕೆ ಐದು ತಿಂಗಳ ಹಿಂದೆಯೇ ಟೆಂಡರ್ ಕರೆಯಲಾಗಿದೆ. ಆದರೆ, ಮಳೆ ಬಿಡುವು ನೀಡದ್ದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಇದೀಗ ದಸರಾ ಸಮೀಪಿಸಿರುವದರಿಂದ ತಾತ್ಕಾಲಿಕವಾಗಿ ಗುಂಡಿಗಳನ್ನು ಕಾಂಕ್ರಿಟ್ ಹಾಕಿ ಮುಚ್ಚಲಾಗುವದು ಎಂದು ನಗರಸಭಾ ಅಧ್ಯಕ್ಷರೂ ಆಗಿರುವ ಅನಿತಾ ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ
ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ; ತಾ.೨೭ರಂದು(ಇAದು) ಸಂಜೆ ೬.೩೦ ಗಂಟೆಗೆ ಗಾಂಧಿ ಮೈದಾನದಲ್ಲಿನ ಜನೋತ್ಸವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವದು. ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸುವರು. ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಿ.ಎಂ.ಹರೀಶ್ ಅಣ್ವೇಕರ್ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಖೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಕ್ಯಾ. ಎಂ.ಎ. ಅಯ್ಯಪ್ಪ, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಪೌರಾಯುಕ್ತ ವಿಜಯ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಶ್ವೇತಾ ಪ್ರಶಾಂತ್ ಹಾಗೂ ದಸರಾ ಸಮಿತಿ ಪದಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಅಧ್ಯಕ್ಷರುಗಳು, ನಗರ ಸಭಾ ಸದಸ್ಯರುಗಳು ಉಪಸ್ಥಿತರಿರುವರೆಂದು ತಿಳಿಸಿದರು.
೫ ಕೋಟಿಯಲ್ಲಿ ಕಲಾಕ್ಷೇತ್ರ
ನಗರಸಭಾ ಕಚೇರಿ ಬಳಿ ಇರುವ ಹಳೆಯ ಕಲಾಕ್ಷೇತ್ರ ಶಿಥಿಲಗೊಂಡಿದ್ದು, ನೂತನ ಕಲಾಕ್ಷೇತ್ರ ನಿರ್ಮಿಸುವ ಸಲುವಾಗಿ ಈಗಾಗಲೇ ರೂ. ೫ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ದಸರಾ ಮುಗಿದ ಕೂಡಲೇ ಈಗಿರುವ ಕಟ್ಟಡವನ್ನು ಕೆಡವಲಾಗುವದು. ಹಾಗಾಗಿ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಲಿಲ್ಲ, ಅಲಂಕಾರಕ್ಕಾಗಿ ವಿದ್ಯುತ್ ದೀಪಗಳನ್ನು ಅಳವಡಿಸಿರುವದಾಗಿ ನಗರಸಭಾ ಸದಸ್ಯರೂ ಆಗಿರುವ ರಮೇಶ್ ಮಾಹಿತಿ ನೀಡಿದರು.
ಮೂರು ಲಕ್ಷ ಮಂದಿ ನಿರೀಕ್ಷೆ
ದಸರಾ ಕಾರ್ಯಕ್ರಮಗಳ ಬಗ್ಗೆ ಮಡಿಕೇರಿ ದಸರಾ ಅಧಿಕೃತ ವೆಬ್ಸೈಟ್ನಲ್ಲಿ ಪ್ರತಿನಿತ್ಯ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ಅನುದಾನಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತಾದರೂ ಇನ್ನೂ ಬಂದಿಲ್ಲ, ಹಾಗಾಗಿ ಈಗ ಇರುವ ೧ಕೋಟಿ ಅನುದಾನದಲ್ಲಿ ಉತ್ಸವ ಆಚರಣೆ ಮಾಡಲಾಗುವದು. ಈ ಬಾರಿಯ ದಸರಾಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಿದ್ದು, ಗುಪ್ತಚರ ಇಲಾಖೆಯ ಮಾಹಿತಿಯಂತೆ ಸುಮಾರು ಮೂರು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಅಲಂಕಾರಕ್ಕೆ ಬಹುಮಾನ
ದಸರಾ ಅಂಗವಾಗಿ ಕಟ್ಟಡ, ಅಂಗಡಿ ಮುಂಗಟ್ಟುಗಳ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದೆ. ಒಟ್ಟು ೩೮ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಎಲ್ಲ ವಿಭಾಗಗಳಲ್ಲೂ ಮೊದಲ ಮೂರು ಸ್ಥಾನಿಗಳಿಗೆ ಬಹುಮಾನ ನೀಡಲಾಗುವದು. ವಾಹನಗಳ ಪೈಕಿ ಸೈಕಲ್ನಿಂದ ಹಿಡಿದು ಎಲ್ಲ ರೀತಿಯ ವಾಹನಗಳಿಗೆ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದ್ದು, ಎಲ್ಲ ವಿಭಾಗಗಳಲ್ಲಿಯೂ ಬಹುಮಾನ ನೀಡಲಾಗುವದು ಎಂದು ಹೇಳಿದರು.
ಗೋಷ್ಠಿಯಲ್ಲಿ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಶ್ವೇತಾ ಪ್ರಶಾಂತ್ ಇದ್ದರು.