ಮಡಿಕೇರಿ, ಸೆ.೨೫: ಕೊಡಗು ಜಿಲ್ಲೆ ಕಳೆದ ಕೆಲವು ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರೀಕ್ಷೆಯಲ್ಲಿದೆ. ಆದರೆ ನಮ್ಮನ್ನಾಳುವವರ ಇಚ್ಛಾಶಕ್ತಿಯ ಕೊರತೆಯಿಂದ ನಿರೀಕ್ಷೆಗಳು ಹುಸಿಯಾಗುತ್ತಿದೆ. ಈ ಕಾರಣದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪರ ಅಭಿಯಾನ ತೀವ್ರಗೊಳಿಸಲು ಕೊಡಗು ರಕ್ಷಣಾ ವೇದಿಕೆ ನಿರ್ಧರಿಸಿದೆ ಎಂದು ವೇದಿಕೆಯ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.

ಉತ್ತರ ಕರ್ನಾಟಕÀಕ್ಕೆ ಸುಲಭವಾಗಿ ಮಂಜೂರಾಗುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಗು ಜಿಲ್ಲೆಗೆ ಯಾಕೆ ಲಭಿಸುತ್ತಿಲ್ಲವೆಂದು ಪ್ರಶ್ನಿಸಿರುವ ಅವರು, ಜನರ ಬಹುದಿನಗಳ ಬೇಡಿಕೆ ಈಡೇರುವವರೆಗೆ ನಿರಂತರ ಅಭಿಯಾನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಕೊಡಗಿನ ಯುವಜನತೆ ಪ್ರಪ್ರಥಮ ಬಾರಿಗೆ ಪಕ್ಷ ಭೇದವಿಲ್ಲದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಕ್ಕೊರಲ ಧ್ವನಿಯೆತ್ತಿದ್ದರು. ಸಾಮಾಜಿಕ ಜಾಲತಾಣದ ಈ ಅಭಿಯಾನ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಸುದ್ದಿಯಾಗಿತ್ತು. ಕೊಡಗು ರಕ್ಷಣಾ ವೇದಿಕೆಯಾದಿಯಾಗಿ ಕೊಡಗಿನ ಬಹುತೇಕ ಸಂಘ, ಸಂಸ್ಥೆಗಳು ಈ ಕುರಿತು ಕರ್ನಾಟಕ ಸರ್ಕಾರವನ್ನು ವಿವಿಧ ರೀತಿಯಲ್ಲಿ ಒತ್ತಾಯಿಸಿದ್ದವು. ಆದರೆ ಕರ್ನಾಟಕ ಸರ್ಕಾರ ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಜನರ ಕನಸಿಗೆ ತಣ್ಣೀರು ಎರಚಿತ್ತು.

ಕರ್ನಾಟಕ ಸರ್ಕಾರ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಲಾಗುವುದು ಎಂದು ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸುವಂತೆ ಮಾಡಿ ಐತಿಹಾಸಿಕ ಜಯವನ್ನು ಪಡೆದಿದ್ದಾರೆ. ಅಲ್ಲದೆ ಕೆಲವೇ ತಿಂಗಳ ಹಿಂದೆ ಚಾಮರಾಜನಗರದಲ್ಲಿ ಕೂಡ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯ ಆರಂಭ ಮಾಡಿದೆ. ಆದರೆ, ಕೊಡಗಿಗೆ ಯಾಕೆ ಇಲ್ಲ? ಎಂಬ ಬಗ್ಗೆ ದನಿ ಎತ್ತಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.