ಚೆಟ್ಟಳ್ಳಿ, ಸೆ. ೨೫: ಕೇಂದ್ರೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಚೆಟ್ಟಳ್ಳಿ ವತಿಯಿಂದ ಕೋತೂರು ಸಮೀಪದ ಬೊಮ್ಮಾಡು ಗಿರಿಜನ ಆಶ್ರಮಶಾಲೆಯಲ್ಲಿ ಬುಡಕಟ್ಟು ಉಪಯೋಜನೆಯಡಿ ಅಣಬೆ ಬೇಸಾಯದ ಕುರಿತು ಸಾಮರ್ಥ್ಯ ಬಲವರ್ಧನೆ ಹಾಗೂ ಸಂಪನ್ಮೂಲ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬುಡಕಟ್ಟು ಕಲ್ಯಾಣ ಇಲಾಖೆಯ ಅಧಿಕಾರಿ ಗುರುಶಾಂತಪ್ಪ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿದರು. ಚೆಟ್ಟಳ್ಳಿಯ ತೋಟಗಾರಿಕಾ ವಿಜ್ಞಾನಿ ಡಾ. ಮುರಳೀಧರ ಬಿ ಎಂ ಮಾತನಾಡಿ, ಸ್ಥಳೀಯರಿಗೆ ಹಾಗೂ ಮಕ್ಕಳಿಗೆ ಸವಾಲಾಗಿರುವ ಅಪೌಷ್ಠಿಕತೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಹಣ್ಣುಗಳ ಪಾತ್ರ ಬಹುಮುಖ್ಯವೆಂದರು.
ಕಾರ್ಮಿಕ ಇಲಾಖೆಯಿಂದ ಆಗಮಿಸಿದ್ದ ಸಿರಾಜ್ಅಹ್ಮದ್ ಅವರು ಬಾಲ್ಯದಲ್ಲಿ ಶಿಕ್ಷಣದ ಮಹತ್ವ, ಬಾಲ ಕಾರ್ಮಿಕರು, ಕಿಶೋರ ಕಾರ್ಮಿಕರು, ಬಾಲಕಾರ್ಮಿಕರ ತಿದ್ದುಪಡಿ ಕಾಯ್ದೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ಟ್ರೆöÊಕೋಡೆರ್ಮಾ (ಜೈವಿಕ ಪೀಡೆನಾಶಕ) ಹಾಗೂ ಅಣಬೆ ಬೇಸಾಯದ ಬಗ್ಗೆ ಚೆಟ್ಟಳ್ಳಿಯ ಸಸ್ಯರೋಗ ವಿಜ್ಞಾನಿ ಮಧುರವರು ತರಬೇತಿ ನೀಡಿದರು. ಸ್ಥಳೀಯರು ಲಾಭದಾಯಕ ಅಣಬೆ ಬೇಸಾಯವನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದೆಂದು, ಅಣಬೆ ಬೇಸಾಯದ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಫಲಾನುಭವಿಗಳಿಗೆ ೬ ಬಗೆಯ ೩೦ ಹಣ್ಣಿನ ಗಿಡಗಳು, ೫ ಕೆ.ಜಿ. ಟ್ರೆöÊಕೋಡೆರ್ಮಾ ಹಾಗೂ ೧/೨ ಕೆ.ಜಿ ಅಣಬೆ ಬೀಜವನ್ನು ವಿತರಿಸಲಾಯಿತು. ಬೊಮ್ಮಾಡು, ಕಾನೂರು, ನಾಲ್ಕೇರಿ ಹಾಗೂ ಬಾಡಗದಿಂದ ೧೦೦ ಕ್ಕೂ ಹೆಚ್ಚು ಫಲಾನುಭವಿಗಳು ಆಗಮಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸದಸ್ಯರು ಭಾಗಿಯಾಗಿದ್ದರು.