ಸೋಮವಾರಪೇಟೆ, ಸೆ. ೨೫: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ನವೀನ್ ಅವರು ಅವಿರೋಧವಾಗಿ ಆಯ್ಕೆಯಾದರು.

ಈವರೆಗೆ ಅಧ್ಯಕ್ಷರಾಗಿದ್ದ ಶೇಖರ್ ಅವರು ಹಿಂದಿನ ಒಡಂಬಡಿಕೆಯAತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಚುನಾವಣಾಧಿ ಕಾರಿಗಳಾದ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಕಾಳನಾಯಕ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿಯ ಒಟ್ಟು ೮ ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು ೭ ಸ್ಥಾನಗಳಲ್ಲಿ ಜಯಗಳಿಸಿದ್ದು, ಒಂದು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಪ್ರಥಮ ಅವಧಿಯಲ್ಲಿ ಶೇಖರ್ ಅವರು ಅಧ್ಯಕ್ಷರಾಗಿ ಒಂದೂವರೆ ವರ್ಷಗಳ ಕಾಲ ಆಡಳಿತ ನಡೆಸಿದ್ದರು.

ಆಗ ಏರ್ಪಟ್ಟಿದ್ದ ಒಡಂಬಡಿಕೆಯAತೆ ಶೇಖರ್ ಅವರು ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ನವೀನ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಅವಿರೋಧ ಆಯ್ಕೆ ನಡೆಯಿತು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ತಾಲೂಕು ಪಂಚಾಯಿತಿ ಮಾಜೀ ಸದಸ್ಯ ಬಿ.ಎ. ಧರ್ಮಪ್ಪ, ಪ್ರಮುಖರಾದ ಕೆ.ಕೆ. ಸುಧಾಕರ್, ಪರಮೇಶ್, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಉಮೇಶ್, ಗ್ರಾ.ಪಂ. ಸದಸ್ಯರುಗಳು, ಪಿಡಿಓ ಮಂಜುಳಾ ಸೇರಿದಂತೆ ಇತರರು ಉಪಸ್ಥಿತರಿದ್ದರು.