ಮಡಿಕೇರಿ, ಸೆ. ೨೫: ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ಎಂಬAತೆ ಚೆಟ್ಟಳ್ಳಿಯ ಅರ‍್ಸ್ ಕ್ಲಬ್‌ನ ಮೂಲಕ ಆಯೋಜಿತವಾಗಿದ್ದ ಮಹಿಳಾ ಕ್ರಿಕೆಟ್ ಪಂದ್ಯಾವಳಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ೧೭ ವಿವಿಧ ಕ್ಲಬ್ ತಂಡಗಳ ಪಾಲ್ಗೊಳ್ಳುವಿಕೆ ಆಯೋಜಕರ ಪ್ರಯತ್ನಕ್ಕೆ ಉತ್ತೇಜನಕಾರಿಯಾಗಿದ್ದು, ಮುಂದಿನ ವರ್ಷವೂ ಮತ್ತಷ್ಟು ಹೊಸತನದೊಂದಿಗೆ ಮಹಿಳಾ ಪಂದ್ಯಾಟ ಏರ್ಪಡಿಸುವ ಚಿಂತನೆಗೆ ಕಾರಣವಾಗಿದೆ.
ನಿನ್ನೆ ಬೆಳಿಗ್ಗೆಯಿಂದಲೇ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಮಹಿಳೆಯರ ಸಂಭ್ರಮ ಮುಗಿಲು ಮುಟ್ಟಿತ್ತು. ಆಟಗಾರ್ತಿಯರಿಂದ ಬೌಂಡರಿ, ಸಿಕ್ಸರ್‌ಗಳು ಸಿಡಿದರೆ... ಪ್ಷೇಕ್ಷಕರಿಂದಲೂ ಕರತಾಡನ, ಹರ್ಷೋದ್ಗಾರ, ಬ್ಯಾಂಡ್‌ವಾದನ, ನೃತ್ಯ ಚೆಟ್ಟಳ್ಳಿಯಲ್ಲಿ ವಿಶೇಷ ಅನುಭವ ಮೂಡಿಸಿತ್ತು. ಮಹಿಳೆಯರ ಈ ಕಲರವದಲ್ಲಿ ಪುರುಷರೂ ಭಾಗಿಗಳಾಗಿದ್ದು ಉತ್ತೇಜನ ನೀಡಿದ್ದರು. ಪಂದ್ಯಾವಳಿ ಪೂರ್ಣಗೊಂಡು ಬಹುಮಾನ ವಿತರಣೆಯ ಬಳಿಕ ಡಿ.ಜೆ. ಸಂಭ್ರಮವೂ ನಡೆಯಿತು. ಪಂದ್ಯಾವಳಿಯ ಯಶಸ್ಸಿನಿಂದ ಹರ್ಷಿತರಾಗಿದ್ದ ಆಯೋಜಕರಾದ ಅರ‍್ಸ್ ಕ್ಲಬ್‌ನ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಕುಣಿದು ಕುಪ್ಪಳಿಸಿದರು. ಇದಾದ ನಂತರ ಕೇಕ್ ಕತ್ತರಿಸುವ ಮೂಲಕವೂ ಈ ಸವಿನೆನಪನ್ನು ಹಂಚಿಕೊಳ್ಳಲಾಯಿತು.
ಅರ‍್ಸ್ ಕ್ಲಬ್ ಅಧ್ಯಕ್ಷೆ ಐಚೆಟ್ಟಿರ ಸುನಿತಾ, ಉಪಾಧ್ಯಕ್ಷೆ ಶೋಭಾ ಚಂಗಪ್ಪ ಕೇಕ್ ಕತ್ತರಿಸಿದರೆ, ಇನ್ನಿತರರು ಸಂಭ್ರಮದಲ್ಲಿ ಭಾಗಿಗಳಾಗುವ ಮೂಲಕ ಪ್ರಥಮ ಬಾರಿಯ ಮಹಿಳಾ ಕ್ರಿಕೆಟ್ ಕಲರವಕ್ಕೆ ತೆರೆಬಿದ್ದಿತು.