ಕುಶಾಲನಗರ, ಸೆ. ೨೫: ಕುಶಾಲನಗರ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯದಲ್ಲಿ ೮೦ ಕ್ಕೂ ಅಧಿಕ ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಲಿದ್ದು, ಕುಶಾಲನಗರ ಪಟ್ಟಣ ಠಾಣೆ ಮತ್ತು ಸಂಚಾರಿ ಠಾಣೆಗಳನ್ನು ವಿಲೀನಗೊಳಿಸಿ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಯ ದರ್ಜೆಗೆ ಏರಲಿದೆ.
ಸುಂಟಿಕೊಪ್ಪ ಠಾಣೆ ಮತ್ತು ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸ್ ವೃತ್ತ ನಿರೀಕ್ಷರ ಅಧೀನಕ್ಕೆ ಒಳಪಡಲಿದ್ದು, ಮೇಲ್ದರ್ಜೆಗೇರಲಿರುವ ಕುಶಾಲನಗರ ಠಾಣೆಗೆ ಸದ್ಯದಲ್ಲಿಯೇ ಇನ್ಸ್ಪೆಕ್ಟರ್ ನೇಮಕವಾಗಲಿದೆ.
ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಪಟ್ಟಣ ಮತ್ತು ಸಂಚಾರಿ ಠಾಣೆಯಲ್ಲಿ ತಲಾ ಇಬ್ಬರು ಉಪ ನಿರೀಕ್ಷರು ಕೆಲಸ ನಿರ್ವಹಿಸಲಿದ್ದಾರೆ. ಈ ಮೂಲಕ ಬಹುತೇಕ ಪ್ರಕರಣಗಳು ಇನ್ಸ್ಪೆಕ್ಟರ್ ಹಂತದಲ್ಲಿ ಇತ್ಯರ್ಥಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇತ್ತೀಚೆಗಷ್ಟೇ ಜಿಲ್ಲೆಯ ಶನಿವಾರಸಂತೆ ಮತ್ತು ಮಡಿಕೇರಿ ಟೌನ್ ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಉಸ್ತುವಾರಿ ಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೇಲ್ದರ್ಜೆಗೇರಿಸುವ ಸಂದರ್ಭ ಸರ್ಕಾರ ಅಧಿಕಾರಿಗಳ ನೇಮಕ ಮಾಡಿದೆ ಹೊರತು ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡುವಲ್ಲಿ ವಿಫಲವಾಗಿದೆ.
-ಚಂದ್ರಮೋಹನ್