ಗೋಣಿಕೊಪ್ಪ ವರದಿ, ಸೆ. ೨೪: ಹಾತೂರು ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಯೋಗ ಕೇಂದ್ರ ಕಟ್ಟಡ ತೀರಾ ಕಳಪೆಯಾಗಿದ್ದು, ಕಾಮಗಾರಿಯನ್ನು ತಕ್ಷಣ ತಡೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ವಿರೋಧದ ನಡುವೆಯೂ ಹಾತೂರು ಗ್ರಾಮ ಪಂಚಾಯಿತಿ ಸಮೀಪ ಸುಮಾರು ೪ ಲಕ್ಷ ರೂ. ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕಳಪೆ ಗುಣಮಟ್ಟ ಹೊಂದಿದೆ. ಗುಣಮಟ್ಟ ಪರಿಶೀಲನೆಗೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಜಮಾಯಿಸಿ ಒತ್ತಾಯಿಸಿದರು.
ಗ್ರಾಮಸ್ಥ ಕೇಳಪಂಡ ರಾಕೇಶ್ ಅಪ್ಪಯ್ಯ ಮಾತನಾಡಿ, ಜಿಎಸ್ಟಿ ಕಳೆದು ರೂ. ೩.೫೬ ಲಕ್ಷ ಹಣದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಿಸ ಬಹುದು. ಆದರೆ, ೨೭ ಚದರ ಮೀಟರ್ ಸುತ್ತಳತೆಯ ಕಟ್ಟಡದ ಅಡಿಪಾಯವನ್ನು ಒಂದೇ ದಿನ ಕಟ್ಟಲಾಗಿದೆ. ತರಾತುರಿಯಲ್ಲಿ ನಿರ್ಮಿಸಿರುವ ಕಂಬದಲ್ಲಿ ೯ ಕ್ಕೂ ಹೆಚ್ಚು ಬಿರುಕುಗಳಿವೆ. ಗೋಡೆ ಮುಟ್ಟಿದ ತಕ್ಷಣ ಕುಸಿಯುತ್ತಿದೆ. ಒಳಭಾಗದ ನೆಲದಲ್ಲಿರುವ ಮರದ ಬುಡವನ್ನು ತೆಗೆಯದೆ ನೆಲಹಾಸು ಹಾಕಲು ಮುಂದಾಗಿದ್ದಕ್ಕೆ ಕೂಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಕಾರಣ ಸ್ಥಗಿತಗೊಂಡಿದೆ. ಮೇಲ್ಚಾವಣಿಗೆ ಆರ್ಸಿಸಿ ಹಾಕಬೇಕೆಂಬ ನಿಯಮವಿದೆ. ಆದರೂ, ಶೀಟ್ ಹಾಕಿ ಪೂರ್ಣಗೊಳಿಸಲಾಗುತ್ತಿದೆ. ಈ ಬಗ್ಗೆ ಕೂಡ ಸ್ಪಷ್ಟನೆ ದೊರೆಯುತ್ತಿಲ್ಲ. ಸ್ಥಳಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಳಪೆ ಗುಣಮಟ್ಟದ ಕಟ್ಟಡ ಎಂದು ಲಿಖಿತವಾಗಿ ಆರೋಗ್ಯ ಇಲಾಖೆಗೆ ತಿಳಿಸಿದ್ದಾರೆ. ಆದರೂ, ಗುತ್ತಿಗೆದಾರ ಅಣ್ಣಪ್ಪ ಇದೇ ಕಟ್ಟಡವನ್ನು ಮುಂದುವರಿಸುವ ಕಾರ್ಯಕ್ಕೆ ಮುಂದಾಗಿರುವುದನ್ನು ನಾವು ವಿರೋಧಿಸುತ್ತೇವೆ. ಗುಣಮಟ್ಟದ ಕಟ್ಟಡ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಗ್ರಾ. ಪಂ. ಸದಸ್ಯ ಕೊಕ್ಕಂಡ ಗಿಣಿ ಗಣಪತಿ, ಪ್ರಮುಖರಾದ ಪುಲಿಯಂಡ ರೋಶನ್ ಕಳಪ್ಪ, ಕೊಂಗಾAಡ ಎಸ್. ದೇವಯ್ಯ, ವಿನೇಶ್ ಇತರರಿದ್ದರು.