ಸೋಮವಾರಪೇಟೆ, ಸೆ. ೨೫: ಮಸಗೋಡು-ಕಣಿವೆ ಮುಖ್ಯರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖಾ ಸಚಿವ ಸಿ.ಸಿ. ಪಾಟೀಲ್ ಮತ್ತು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರುಗಳು ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ರಾಜ್ಯ ಲೋಕೋಪಯೋಗಿ ಇಲಾಖಾ ಸಚಿವ ಸಿ.ಸಿ. ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಗ್ರಾಮಸ್ಥರ ನಿಯೋಗಕ್ಕೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ತಿಳಿಸಿದ್ದಾರೆ.

ಮಸಗೋಡು-ಕಣಿವೆ ರಸ್ತೆಯು ಅನೇಕ ವರ್ಷಗಳಿಂದ ದುರಸ್ತಿ ಕಾಣದೇ ಇದೀಗ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಇದೀಗ ರಸ್ತೆ ಅಭಿವೃದ್ಧಿಗಾಗಿ ಹೋರಾಟ ಸಮಿತಿಯೂ ರಚನೆಯಾಗಿದೆ. ಈ ನಡುವೆ ಯಲಕನೂರು, ಅರೆಯೂರು, ಹೊಸಳ್ಳಿ, ಸೀಗೇಹೊಸೂರು, ಅಬ್ಬೂರುಕಟ್ಟೆ ಭಾಗದ ಸಾರ್ವಜನಿಕರ ನಿಯೋಗ ಸಚಿವರು ಮತ್ತು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಉದ್ದೇಶಿತ ರಸ್ತೆ ಅಭಿವೃದ್ಧಿಗೆ ಸುಮಾರು ೧೫ ಕೋಟಿ ಅಗತ್ಯವಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಕ್ರಿಯಾಯೋಜನೆ ತಯಾರಿಸಲಾಗಿದೆ. ಈ ಕ್ರಿಯಾಯೋಜನೆಯನ್ನು ಸಚಿವರಿಗೆ ನೀಡಿದ್ದು, ರಸ್ತೆಯ ಅಗತ್ಯತೆಯ ಬಗ್ಗೆ ವಿವರಿಸಲಾಗಿದೆ. ಇದಕ್ಕೆ ಸಚಿವರು ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ವಿ.ಎಂ. ವಿಜಯ ಮಾಹಿತಿ ನೀಡಿದ್ದಾರೆ.

ಶಾಸಕ ಅಪ್ಪಚ್ಚುರಂಜನ್ ಅವರು ಪ್ರತಿಕ್ರಿಯಿಸಿ ತಕ್ಷಣಕ್ಕೆ ರಸ್ತೆ ಅಭಿವೃದ್ಧಿಗೆ ೪ ಕೋಟಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಅನುದಾನ ಬಿಡುಗಡೆಯಾದ ಬೆನ್ನಲ್ಲೇ ಕ್ರಿಯಾಯೋಜನೆ ಸಹಿತ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಭರವಸೆಯಿತ್ತಿರುವ ಬಗ್ಗೆ ವಿ.ಎಂ. ವಿಜಯ ಅವರು ತಿಳಿಸಿದ್ದಾರೆ.

ಸಚಿವ-ಶಾಸಕರ ಭೇಟಿ ಸಂದರ್ಭ ಗ್ರಾ.ಪಂ. ಸದಸ್ಯ ವಿನೋದ್, ಪ್ರಮುಖರಾದ ಪಿ.ಡಿ. ಪ್ರಕಾಶ್, ಸನಿಲ್, ಅಯ್ಯಪ್ಪ, ಸುನಿಲ್, ವಿರೂಪಾಕ್ಷ, ಜೋಯಪ್ಪ, ಯಲಕನೂರು ಪ್ರಸನ್ನ, ದಿನೇಶ್, ಅರೆಯೂರು ಸುರೇಶ್, ಹೊಸಳ್ಳಿ ಕೃಷ್ಣಪ್ಪ, ಅಬ್ಬೂರುಕಟ್ಟೆ ಪ್ರಕಾಶ್, ಸೀಗೆಹೊಸೂರು ಧನಂಜಯ್, ನೇಗಳ್ಳೆ ಜೀವನ್, ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.