ಕುಶಾಲನಗರ, ಸೆ.೨೫: ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಕ್ಷ ಕಿರಣ ತಜ್ಞರ ಬಳಿ ತೆರಳಿದ ಸಂದರ್ಭ ಎಕ್ಸ್ ರೇ ಘಟಕದಲ್ಲಿ ಬಿಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದು, ಇನ್ನೂ ಪತ್ತೆ ಆಗಿಲ್ಲ.
೭ನೇ ಹೊಸಕೋಟೆ ಕಂಬಿಬಾಣೆ ಚಿಕ್ಲಿಹೊಳೆ ರಸ್ತೆಯ ನಿವಾಸಿ ಮಹಮ್ಮದ್ ರಫೀಕ್ ಎಂಬವರ ಪತ್ನಿ ಎಂ.ಎA. ಫರ್ಜಾನ ಎಂಬವರಿಗೆ ಸೇರಿದ ಚಿನ್ನಾಭರಣಗಳು ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಎಕ್ಸ್ ರೇ ಘಟಕದಲ್ಲಿ ನಾಪತ್ತೆಯಾಗಿದ್ದು, ಜುಲೈ ೨೦ ರಂದು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಬಗ್ಗೆ ಮೊಕದಮೆ ದಾಖಲಾಗಿದೆ. ಚಿನ್ನಾಭರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.
ಜುಲೈ ೧೯ ರಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ಎಕ್ಸ್ ರೇ ಮಾಡಿಸಲು ತೆರಳಿದ ಸಂದರ್ಭ ಅಲ್ಲಿನ ತಜ್ಞರ ಸೂಚನೆಯಂತೆ ಮೈ ಮೇಲಿದ್ದ ಚಿನ್ನಾಭರಣಗಳನ್ನು ಬಿಚ್ಚಿಡುವಂತೆ ತಿಳಿಸಿದ್ದಾರೆ. ಆಭರಣಗಳನ್ನು ಪರ್ಸ್ನಲ್ಲಿ ಹಾಕಿ ಎಕ್ಸ್ ರೇ ಕೋಣೆ ಒಳಗೆ ಇಟ್ಟು ನಂತರ ಪರ್ಸ್ ತೆಗೆದುಕೊಂಡು ಪರಿಶೀಲಿಸಿದ ಸಂದರ್ಭ ಚಿನ್ನಾಭರಣಗಳು ನಾಪತ್ತೆಯಾಗಿರುವುದಾಗಿ ಮಡಿಕೇರಿ ನಗರ ಠಾಣೆಗೆ ದೂರು ನೀಡಲಾಗಿತ್ತು. ಕಳ್ಳತನವಾದ ಒಟ್ಟು ಚಿನ್ನದ ಮೌಲ್ಯ ೧.೫ ಲಕ್ಷ ರೂ. ಗಳಾಗಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಫರ್ಜಾನ ಅಳಲು ತೋಡಿಕೊಂಡಿದ್ದಾರೆ.