ಸೋಮವಾರಪೇಟೆ, ಸೆ. ೨೫: ಇತರ ಸಮುದಾಯಗಳ ಅಭಿವೃದ್ಧಿಗೆ ಅನುದಾನ ನೀಡಿದಂತೆಯೇ ರಾಜ್ಯ ಸರ್ಕಾರ ಕೊಡವ ಸಮುದಾಯದ ಅಭಿವೃದ್ಧಿಗಾಗಿ ೧೦ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಆರ್ಥಿಕತೆಯ ಅಗತ್ಯವಿರುವ ಕೊಡವ ಸಮಾಜಗಳಿಗೆ ತಲಾ ೧೦ ಲಕ್ಷ ನೀಡಲು ಕ್ರಮವಹಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಇಲ್ಲಿನ ಕೊಡವ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕೈಲ್ಮುಹೂರ್ತ ಸಂತೋಷ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡವ ಸಮುದಾಯದ ಅಭಿವೃದ್ಧಿಗೆ ಈಗಿನ ಬಿಜೆಪಿ ಸರ್ಕಾರ ೧೦ ಕೋಟಿ ಅನುದಾನ ನೀಡಿದೆ. ಇದರಲ್ಲಿ ೬ ಕೋಟಿಯನ್ನು ಕೊಡವ ಫೆಡರೇಷನ್ಗೆ ನೀಡಲಾಗುವುದು. ಉಳಿದ ೪ ಕೋಟಿಯ ಪೈಕಿ ೩ ಕೋಟಿ ಅನುದಾನವನ್ನು ಕೊಡವ ಸಮಾಜಗಳಿಗೆ ವಿತರಿಸಲಾಗುವುದು. ೧ ಕೋಟಿ ಅನುದಾನವನ್ನು ಭಾಗಮಂಡಲದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.
ಕೊಡಗು ಸ್ವರ್ಗಕ್ಕೆ ಸಮಾನವಾದ ಜಿಲ್ಲೆ. ಇಲ್ಲಿನ ಜಮ್ಮಾ ಹಿಡುವಳಿ ಭೂಮಿಯನ್ನು
(ಮೊದಲ ಪುಟದಿಂದ) ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಹಲವಷ್ಟು ಕೊಡವರು ಇಂದು ಹೊರ ರಾಜ್ಯ, ಜಿಲ್ಲೆಗಳಲ್ಲಿ ನೆಲೆಸಿದ್ದರೂ ಮೂಲ ನೆಲೆಯ ಸಂಬAಧವನ್ನು ಕಡಿದುಕೊಳ್ಳಬಾರದು. ಇಲ್ಲಿನ ಮಣ್ಣಿಗೆ ಮಹತ್ವವಿದ್ದು, ಸಂಸ್ಕೃತಿಯ ಮೂಲವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ರಾಷ್ಟç ರಕ್ಷಣಾ ಕ್ಷೇತ್ರದಲ್ಲಿ ಕೊಡಗಿನವರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಮೂವರು ಲೆಫ್ಟಿನೆಂಟ್ ಜನರಲ್ಗಳಿದ್ದಾರೆ. ಕರ್ನಲ್, ಬ್ರಿಗೇಡಿಯರ್ಗಳ ಸಂಖ್ಯೆಯೂ ಹೆಚ್ಚಿದೆ. ದೇಶದ ರಕ್ಷಣಾ ಕಾರ್ಯದಲ್ಲಿ ಕೊಡಗು ಮುಂಚೂಣಿಯಲ್ಲಿದೆ ಎಂದು ಶಾಸಕರು ಹೇಳಿದರು.
ಕೊಡವ ಸಮಾಜಗಳು ಇನ್ನಷ್ಟು ಸಂಘಟಿತಗೊಳ್ಳಬೇಕು. ಸಮಾಜದ ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ನಡೆಸುವ ಬದಲು ಎಲ್ಲರೂ ಮಾತುಕತೆಯ ಮೂಲಕ ಒಂದಾಗಿ ಸಾಗಬೇಕು. ಆಗ ಮಾತ್ರ ಸಮುದಾಯದಲ್ಲಿ ಪರಸ್ಪರ ವಿಶ್ವಾಸ, ಬಾಂಧವ್ಯ ಮೂಡುತ್ತದೆ ಎಂದು ರಂಜನ್ ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಕರವಟ್ಟೀರ ಪೆಮ್ಮಯ್ಯ ಮಾತನಾಡಿ, ಕೊಡವ ಸಂಸ್ಕೃತಿ, ಆಚಾರ ವಿಚಾರ, ಪದ್ದತಿ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ಕೊಡವ ಸಮಾಜ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.
ಬೆAಗಳೂರಿನಲ್ಲಿ ೧ ಲಕ್ಷಕ್ಕೂ ಅಧಿಕ ಮಂದಿ ಕೊಡವರು ವಾಸವಿದ್ದಾರೆ. ಆದರೆ ಸಮಾಜದಲ್ಲಿ ಕೇವಲ ೧೫ ಸಾವಿರ ಸದಸ್ಯರಿದ್ದಾರೆ. ಕೊಡಗಿನಿಂದ ತೆರಳಿ ಬೆಂಗಳೂರಿನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಎಲ್ಲರೂ ಸಮಾಜದ ಸದಸ್ಯರಾಗಬೇಕು. ಈ ಬಗ್ಗೆ ಅವರ ಕುಟುಂಬದವರು ಮನವರಿಕೆ ಮಾಡಿಕೊಡಬೇಕು. ಯುವ ಜನಾಂಗಕ್ಕೆ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮೂಡಿಸುವಂತಾಗಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರು, ಕೊಡವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗಬೇಕು. ಪೆಡರೇಷನ್ ಆಫ್ ಕೊಡವ ಸಮಾಜದ ಮೂಲಕ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ಪೂಣಚ್ಚ, ಕಾರ್ಯದರ್ಶಿ ಅನಿಲ್, ಮಹಿಳಾ ಘಟಕದ ಅಧ್ಯಕ್ಷೆ ಮನುಭಾಯಿ, ಇಂದು ಪೆಮ್ಮಯ್ಯ ಅವರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಸಮಾಜದ ವಿದ್ಯಾನಿಧಿಗೆ ಕರವಟ್ಟೀರ ಪೆಮ್ಮಯ್ಯ-ಇಂದು ದಂಪತಿ ೧೦ ಸಾವಿರ ಧನ ಸಹಾಯ ನೀಡಿದರು.
ಕೈಲ್ ಮುಹೂರ್ತ ಸಂತೋಷ ಕೂಟದ ಅಂಗವಾಗಿ ಸಮಾಜದ ಸದಸ್ಯರುಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಹಗ್ಗಜಗ್ಗಾಟ, ಕೊಡವ ವಾಲಗ ನೃತ್ಯ, ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.