ಸೋಮವಾರಪೇಟೆ, ಸೆ. ೨೫: ಪ್ರತಿದಿನ ಬಾಡಿಗೆ, ವರ್ಕ್ಶಾಪ್ ಕೆಲಸಗಳಲ್ಲಿಯೇ ಸಮಯ ಕಳೆಯುವ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರು ಇಂದು ಕೆಲಸದ ಜಂಜಾಟ ಮರೆತು ಕ್ರೀಡಾ ಸ್ಪೂರ್ತಿಯೊಂದಿಗೆ ಮೈದಾನದಲ್ಲಿ ಸಂಭ್ರಮಿಸಿದರು.
ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಅದ್ದೂರಿ ಆಯುಧ ಪೂಜೋತ್ಸವ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡಾಕೂಟಗಳಲ್ಲಿ ಚಾಲಕರು-ಕೆಲಸಗಾರರು ಅತ್ಯುತ್ಸಾಹದಿಂದ ಭಾಗಿಯಾಗಿದ್ದರು.
ಯುವಕರೊಂದಿಗೆ ವಯಸ್ಕರೂ ಸಹ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಸಂಘದ ಸದಸ್ಯರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆಯುವುದು, ಕಬಡ್ಡಿ, ಬಾಂಬ್ ಇನ್ ದ ಸಿಟಿ ಸೇರಿದಂತೆ ಇನ್ನಿತರ ಕ್ರೀಡಾ ಚಟುವಟಿಕೆ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ದಿನನಿತ್ಯ ಕೆಲಸದಲ್ಲಿ ತೊಡಗಿಸಿಕೊಳ್ಳುವ ಚಾಲಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗಿಯಾಗ ಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಟಾರ್ ಯೂನಿಯನ್ ಅಧ್ಯಕ್ಷ ಕೆ.ಜಿ. ಸುರೇಶ್ ವಹಿಸಿದ್ದರು. ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ವಿನ್ಸಿ ಡಿಸೋಜ, ಸಲಹೆಗಾರ ಟಿ.ಕೆ. ರಮೇಶ್, ಖಜಾಂಚಿ ಮಣಿಕುಶಾಲಪ್ಪ, ಸಹ ಕಾರ್ಯದರ್ಶಿ ಎಸ್.ಎಂ. ಕೃಷ್ಣ, ಡ್ಯಾನಿ ಡೋಮಿನಿಕ್, ಗೌರವಾಧ್ಯಕ್ಷ ಭರತ್, ಪ್ರಮುಖರಾದ ಜನಾರ್ಧನ್, ಬಿ.ಸಿ. ಹರೀಶ್, ಜೆಸಿ ಮಾಜಿ ಅಧ್ಯಕ್ಷ ಮನೋಹರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.