ಗೋಣಿಕೊಪ್ಪಲು, ಸೆ. ೨೫: ಸುರಿದ ಮಳೆಯಿಂದಾಗಿ ಕೊಡಗಿನ ಬಹುತೇಕ ರೈತರು, ಕಾಫಿ ಬೆಳೆಗಾರರು ತೋಟದಲ್ಲಿ ಬೆಳೆದಿರುವ ಕಾಫಿ ಬೆಳೆಗಳು ಹಾನಿಯಾಗಿ ರೈತರಿಗೆ ನಷ್ಟ ಸಂಭವಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ನಷ್ಟ ಪರಿಹಾರವನ್ನು ತುಂಬಿಕೊಡಲು ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಕಾಫಿ ಮಂಡಳಿಯ ಉಪ ನಿರ್ದೇಶಕಿ ಡಾ. ಕೆ. ಶ್ರೀದೇವಿ ಮೂಲಕ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕು ಪದಾಧಿಕಾರಿಗಳು ಅರುವತ್ತೋಕ್ಕಲು ಸಮೀಪದ ಕಾಫಿ ಮಂಡಳಿಯ ಕಚೇರಿಗೆ ತೆರಳಿ ಕಚೇರಿಯಲ್ಲಿದ್ದ ಹಿರಿಯ ಅಧಿಕಾರಿ ಗಳೊಂದಿಗೆ ಬೆಳೆ ನಷ್ಟ ಪರಿಹಾರ ವಿಚಾರದಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ವೇಳೆ ಅಧ್ಯಕ್ಷ ಮನು ಸೋಮಯ್ಯ, ಮಾತನಾಡಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಕಾಫೀ ಫಸಲುಗಳು ನೆಲಕ್ಕೆ ಉರುಳಿ ರೈತನಿಗೆ ತುಂಬಲಾರದ ನಷ್ಟ ಸಂಭವಿಸಿದೆ.
ಆದರೆ ಕಾಫಿ ಮಂಡಳಿ ಹಾಗೂ ಕೃಷಿ ಅಧಿಕಾರಿಗಳು ಸರ್ವೆ ನಡೆಸುವ ಸಂದರ್ಭ ಕೇವಲ ಕೆಲವು ಪ್ರದೇಶಗಳನ್ನು ಮಾತ್ರ ಆಯ್ಕೆ ಮಾಡಿ ಆ ಭಾಗದ ಶೇ. ೩೩ಕ್ಕಿಂತ ಅಧಿಕ ನಷ್ಟ ಸಂಭವಿಸಿರುವ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಂಡಿರುವ ಬಗ್ಗೆ ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಕಾಫಿ ಮಂಡಳಿಯ ಉಪ ನಿರ್ದೇಶಕಿ ಡಾ. ಕೆ. ಶ್ರೀದೇವಿ ಉತ್ತರಿಸಿ ಮಂಡಳಿ ವತಿಯಿಂದ ಸರ್ವೆ ಕಾರ್ಯವನ್ನು ಹಲವು ಹಂತಗಳಲ್ಲಿ ಕೈಗೆತ್ತಿಕೊಳ್ಳ ಲಾಗಿತ್ತು. ಬಹುತೇಕ ಭಾಗದಲ್ಲಿ ರೈತರಿಗೆ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ ಎಂದು ಸಮಜಾಯಿಸಿಕೆ ನೀಡಿದರು.
ಅಧಿಕಾರಿಗಳ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತ ಸಂಘದ ಪದಾಧಿಕಾರಿಗಳು ಸರ್ವೆ ನಡೆಸುವುದರಿಂದ ಕೆಲವೇ ಕೆಲವು ರೈತರಿಗೆ ಮಾತ್ರ ಪ್ರಯೋಜನ ದೊರಕುತ್ತಿದೆ. ಆದರೆ ಬಹುತೇಕ ರೈತರು ಇದರಿಂದ ವಂಚಿತರಾಗಲಿದ್ದಾರೆ. ಹೀಗಾಗಿ ೨ ತಾಲೂಕುಗಳನ್ನು ಹಾಗೂ ಕೊಡಗು ಜಿಲ್ಲೆಯನ್ನು ಪರಿಗಣಿಸಿ ಸರ್ಕಾರಕ್ಕೆ ನಷ್ಟ ಸಂಭವಿಸಿರುವ ಬಗ್ಗೆ ಹಾಗೂ ರೈತರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಮನವರಿಕೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು.
ವೀರಾಜಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಕಾಫಿ ಮಂಡಳಿಯ ಅಧಿಕಾರಿಗಳು ರೈತರ ನಷ್ಟದ ಬಗ್ಗೆ ಸರ್ವೆ ಕಾರ್ಯ ನಡೆಸುತ್ತಿದ್ದಾರೆ. ಕೆಲ ದಿನಗಳಲ್ಲಿ ಪೊನ್ನಂಪೇಟೆ ತಾಲೂಕಿನ ರೈತರ ತೋಟದಲ್ಲಿ ಸರ್ವೆ ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ.
ನಷ್ಟ ಅನುಭವಿಸಿರುವ ಯಾವುದೇ ರೈತರನ್ನು ಪರಿಹಾರದಿಂದ ಹೊರಗಿಡುವ ಆಲೋಚನೆ ಇಲ್ಲ. ರೈತರ ಹಿತ ಕಾಪಾಡುವುದು ಕಾಫಿ ಮಂಡಳಿಯ ಮೂಲ ಉದ್ದೇಶ. ಹೀಗಾಗಿ ನಷ್ಟ ಅನುಭವಿಸಿರುವ ಪ್ರತಿ ರೈತರಿಗೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ. ಕೆ. ಶ್ರೀದೇವಿ ಹೇಳಿದರು.
ಅಧಿಕಾರಿಯ ಭೇಟಿಯ ವೇಳೆ ರೈತ ಸಂಘದ ಪ್ರದಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಕಾನೂನು ಸಲಹೆಗಾರ ವಕೀಲ ಹೇಮಚಂದ್ರ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಶ್ರೀಮಂಗಲ, ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್, ದೇವಣಿರ ವಜ್ರ ಬೋಪಣ್ಣ, ಬುಟ್ಟಿಯಂಡ ಹರೀಶ್ ಸೋಮಯ್ಯ, ಚೇರಂಡ ಪೂಣಚ್ಚ, ಮರಗೋಡು ಸಜೀವ, ಸಿದ್ದಾಪುರ ಮಾದಪ್ಪ, ಲಿಖಿತ್, ಕರಡಿಗೋಡು ಚಂದ್ರ, ವಿಕ್ರಮ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.