ಚೆಟ್ಟಳ್ಳಿ, ಸೆ. ೨೪: ಸದಾ ಅಡುಗೆ ಮನೆ, ಸಂಸಾರ ನಿರ್ವಹಣೆಯ ಜಂಜಾಟ ನಡುವೆ ಜೀವನ ಸಾಗಿಸುತ್ತಿದ್ದ ಮಹಿಳೆಯರು ಇಂದು ‘ಕೂಲ್ ಮೂಡ್’ನಲ್ಲಿದ್ದರು. ಸೌಟ್ ಹಿಡಿಯುವ ಕೈನಲ್ಲಿ ‘ಬ್ಯಾಟ್’ ಇತ್ತು, ಮನೆಕೆಲಸದ ಬದಲು ‘ಬೌಲಿಂಗ್’ನಲ್ಲಿ ತೊಡಗಿಸಿ ಕೊಂಡಿದ್ದರು. ‘ಫೀಲ್ಡ್’ನಲ್ಲಿ ನಾವ್ಯರಿಗೂ ಕಮ್ಮಿ ಇಲ್ಲ ಎಂಬAತೆ ಕ್ರಿಕೆಟ್ ಆಡಿ ಸಂಭ್ರಮಿಸಿದರು. ಇದನ್ನು ಕ್ರೀಡಾಪ್ರೇಮಿಗಳು ಕಣ್ತುಂಬಿಕೊAಡರು.
ಹೌದು.. ಈ ದೃಶ್ಯಾವಳಿಗಳು ಕಂಡು ಬಂದಿದ್ದು, ಚೆಟ್ಟಳ್ಳಿ ಅವರ್ ಕ್ಲಬ್ ವತಿಯಿಂದ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ನಾಕ್ಔಟ್ ಕ್ರಿಕೆಟ್ ಪಂದ್ಯಾವಳಿಯಲ್ಲಿ.
ಜಿಲ್ಲೆಯ ವಿವಿಧೆಡೆಗಳಿಂದ ೧೭ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ನೊಂದಾವಣಿ ಮಾಡಿಕೊಂಡ ತಂಡಗಳು ಪ್ರತೀ ಪಂದ್ಯದಲ್ಲಿ ೩ ಓವರ್ನಂತೆ ಆಡಿದರೆ ಅಂತಿಮ ಪಂದ್ಯಾಟವನ್ನು ೪ ಓವರ್ಗೆ ಹೆಚ್ಚಿಸಲಾಗಿತ್ತು. ಪ್ರಬಲ ಪೈಪೋಟಿ ನೀಡಿ ಸೆಮಿಫೈನಲ್ ಪ್ರವೇಶಿಸಿದ ಆದರ್ಶ್
(ಮೊದಲ ಪುಟದಿಂದ) ಯೂತ್ ಕ್ಲಬ್ ಮರಗೋಡು ಸ್ಪೋರ್ಟ್ಸ್ ರಿಕ್ರಿಯೇಷನ್ ಕ್ಲಬ್ ವಿರುದ್ಧ ಗೆಲುವು ಸಾಧಿಸಿದರೆ, ಅವರ್ ಕ್ಲಬ್ ಟಿ. ಶೆಟ್ಟಿಗೇರಿ ಸಂಭ್ರಮ ತಂಡದ ವಿರುದ್ಧ ಗೆಲುವು ದಾಖಲಿಸಿತು.
ಫೈನಲ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಅವರ್ ಕ್ಲಬ್ ನಿಗದಿತ ೪ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೩೮ ರನ್ಗಳ ಗುರಿ ನೀಡಿತು. ರನ್ ಗುರಿ ಬೆನ್ನತ್ತಿದ ಆದರ್ಶ್ ಯೂತ್ ಕ್ಲಬ್ ೨ ವಿಕೆಟ್ ನಷ್ಟಕ್ಕೆ ಭರ್ಜರಿ ೪೨ ರನ್ ಪೇರಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಸೆಮಿಫೈನಲ್ನಲ್ಲಿ ಸೋತ ಸಂಭ್ರಮ ಕ್ಲಬ್ ಟಿ. ಶೆಟ್ಟಿಗೇರಿ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.
ವಿಜೇತ ತಂಡಕ್ಕೆ ಟ್ರೋಫಿ ಹಾಗೂ ೧೧ ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಹಾಗೂ ೬ ಸಾವಿರ ನಗದು, ತೃತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಹಾಗು ೩ ಸಾವಿರ ನಗದು ಬಹುಮಾನ ನೀಡಲಾಯಿತು.
ಉತ್ತಮ ಪ್ರದರ್ಶನ ನೀಡಿ ಆಲ್ರೌಂಡರಾಗಿ ಹೊರಹೊಮ್ಮಿದ ಮನೆಯಪಂಡ ಅಂಜಲಿ ಸೋಮಯ್ಯ, ಅತ್ಯುತ್ತಮ ಆಟ ಪ್ರದರ್ಶಿಸಿದ ಮುಳ್ಳಂಡ ವಿಂದ್ಯಾ ರಂಜನ್, ಜ್ಯೋತಿ, ಅಶ್ವಿನಿ, ವಿನೂತ, ಕೆಚೆಟ್ಟಿರ ರತಿ ಕಾರ್ಯಪ್ಪ ಅವರುಗಳಿಗೆ ವಿಶೇಷ ಬಹುಮಾನ ನೀಡಲಾಯಿತು. ಮಡಿಕೇರಿಯ ಪೊಮ್ಮಕ್ಕಡ ಕೂಟಕ್ಕೆ ಅತ್ಯುತ್ತಮ ‘ಚಿಯರ್ ಅಪ್’ ತಂಡ ಎಂದು ಬಹುಮಾನವನ್ನು ನೀಡಲಾಯಿತು.
ಪಂದ್ಯಾವಳಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ, ಕ್ರಿಕೆಟ್ ಆಡುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚಿರ ಎ.ಅಯ್ಯಪ್ಪ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾ ಗಲಿದೆ. ಮಹಿಳಾ ಕ್ಲಬ್ ವಿನೂತನ ಪ್ರಯತ್ನ ನಡೆಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚೆಟ್ಟಳ್ಳಿ ಪ್ರೌಢಶಾಲೆಯ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದರು.
ಅವರ್ ಕ್ಲಬ್ನ ಅಧ್ಯಕ್ಷೆ ಐಚೆಟ್ಟಿರ ಸುಮಿತಾ ಮಾಚಯ್ಯ, ಉಪಾಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ, ಮಾಜಿ ಅಧ್ಯಕ್ಷೆ ಕೊಂಗೇಟಿರ ದೇಚು ಮುದ್ದಯ್ಯ, ಕಾರ್ಯದರ್ಶಿ ಅಂಜಲಿ ಸೋಮಯ್ಯ, ಖಜಾಂಜಿ ಮುಳ್ಳಂಡ ಸುಶೀಲಾ ತಮ್ಮಯ್ಯ ಉಪಸ್ಥಿತರಿದ್ದರು.
-ಕರುಣ್ ಕಾಳಯ್ಯ