ಕುಶಾಲನಗರ, ಸೆ.೨೪: ಎಟಿಎಂ ಕೇಂದ್ರದಲ್ಲಿ ಬ್ಯಾಂಕ್ ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಅಂತರ ಜಿಲ್ಲಾ ವಂಚಕನನ್ನು ಕುಶಾಲನಗರ ಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ನಿವಾಸಿ ಅರವಿಂದ (೪೧) ಬಂಧಿತ ಆರೋಪಿ. ಆರೋಪಿಯಿಂದ ೧,೫೦,೦೦೦ ರೂಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಶಾಲನಗರ ಮೈಸೂರು ರಸ್ತೆಯ ಬ್ಯಾಂಕುಗಳ ಎಟಿಎಂಗಳಲ್ಲಿ ಗ್ರಾಹಕರು ಹಣ ನಗದಿಕರಿಸುತ್ತಿದ್ದ ಸಂದರ್ಭ ಹೊಂಚು ಹಾಕಿ ಅವರ ಎಟಿಎಂ ಕಾರ್ಡ್ ಬದಲಿಸಿ ನಂತರ ಅವರ ಖಾತೆಯಿಂದ ಹಣವನ್ನು ವಂಚಿಸಿದ ಎರಡು ಪ್ರಕರಣಗಳಲ್ಲಿ ಆರೋಪಿ ಅರವಿಂದ ಶಾಮೀಲಾಗಿರುವ ಬಗ್ಗೆ ವಿಚಾರಣೆ ಸಂದರ್ಭ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕುಶಾಲನಗರ- ಮೈಸೂರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕೇಂದ್ರ ದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಮಾದಪ್ಪ ಎಂಬವರು ಹಣ ಪಡೆಯಲು ತೆರಳಿದ ಸಂದರ್ಭ ಅಲ್ಲಿ ಹೊಂಚು ಹಾಕುತ್ತಿದ್ದ. ಈ ಸಂದರ್ಭ ಮಾದಪ್ಪ ಅವರ ಎಟಿಎಂ ಕಾರ್ಡ್ ನಿಂದ ಹಣ ಬಂದಿಲ್ಲ. ಈ ಸಂದರ್ಭ ಉಪಯೋಗಿಸಿಕೊಂಡ ಅರವಿಂದ್ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪಡೆದು ಅವರ ಎದುರೆ ಕಾರ್ಡ್ನ ಪಿನ್ ಬದಲಿಸಿ ಬೇರೆ ಎಟಿಎಂ ನೀಡಿ ಬಳಿಕ ೨ ಲಕ್ಷ ರೂ.ಗಳು ಮತ್ತು ಮತ್ತೊಬ್ಬ ಗ್ರಾಹಕರ ೨೦ ಸಾವಿರ ರೂಗಳನ್ನು ಖಾತೆಯಿಂದ ತೆಗೆದಿರುವುದು ಖಚಿತಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಟಿಎಂ ಕೇಂದ್ರದ ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಕಲೆ ಹಾಕಿದ ಕುಶಾಲನಗರ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು. ಆರೋಪಿ ಅರವಿಂದ ಕುಣಿಗಲ್ ಬಳಿ ಇದೇ ರೀತಿಯ ಪ್ರಕರಣ ಒಂದರಲ್ಲಿ ಆರೋಪಿ ಎಂದು ಮಾಹಿತಿ ತಿಳಿದ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಅಪ್ಪಾಜಿ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದ್ದು, ಆತನಿಂದ ೧ ಲಕ್ಷದ ೫೦ ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎA. ಅಯ್ಯಪ್ಪ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕುಶಾಲನಗರ ಠಾಣಾಧಿಕಾರಿ ಅಪ್ಪಾಜಿ ಮತ್ತು ಎಎಸ್ಐಗಳಾದ ಗಣಪತಿ, ಗೋಪಾಲ್ ಮತ್ತು ಸಿಬ್ಬಂದಿಗಳಾದ ಸುಧೀಶ್, ಅರುಣ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.