ವೀರಾಜಪೇಟೆ, ಸೆ. ೨೪: ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕೈಗೊಂಡಿರುವ ‘ಪೇ ಸಿಎಂ’ ಅಭಿಯಾನ ಹಿನ್ನೆಲೆ ವೀರಾಜಪೇಟೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಕೈಗೊಂಡ ಸಂದರ್ಭ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿ ಬಿಡುಗಡೆಗೊಳಿಸಿದರು.

ವೀರಾಜಪೇಟೆಯ ರಾಮ ಮೂರ್ತಿ ರಸ್ತೆಯ ನೂತನ ಕಾಂಗ್ರೆಸ್ ಕಚೇರಿಯಲ್ಲಿ ಜಮಾವಣೆ ಗೊಂಡ ಕಾಂಗ್ರೆಸ್ ನಾಯಕರುಗಳು ಹಾಗೂ ಮುಖಂಡರು ‘ಪೇ ಸಿಎಂ’ ಅಭಿಯಾನದ ಅಂಗವಾಗಿ ಪೋಸ್ಟರ್ ಹಿಡಿದು ನಗರದ ಆಯ್ದ ಭಾಗಗಳಲ್ಲಿ ಪೋಸ್ಟರ್ ಅಂಟಿಸಲು ತಯಾರಾಗಿದ್ದರು.

ಪ್ರತಿಭಟನಾ ನಿರತರು ಗಡಿಯಾರ ಕಂಬದ ಬಳಿ ತೆರಳಿ ಗಡಿಯಾರ ಕಂಬಕ್ಕೆ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಪೋಸ್ಟರ್ ಅಂಟಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತಕ್ಷಣವೇ ವೃತ್ತ ನಿರೀಕ್ಷಕ ಶಿವರುದ್ರ ಅವರ ನಿರ್ದೇಶನದಂತೆ ಎ.ಎಸ್. ಪೊನ್ನಣ್ಣ, ತೀತಿರ ಧರ್ಮಜ ಉತ್ತಪ್ಪ ಸೇರಿ ೩೦ ಮಂದಿಯನ್ನು ಬಂಧನ ಮಾಡಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ತಿಮ್ಮಯ್ಯ, ಕೆಪಿಸಿಸಿ ಸಂವಹನಕಾರ ಆರ್.ಕೆ. ಸಲಾಂ, ಪುರಸಭೆ ಸದಸ್ಯರುಗಳು, ಕಾಂಗ್ರೆಸ್ ಪ್ರಮುಖ ಮತಿನ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಬೀರ್, ವಲಯ ಹಾಗೂ ವಿವಿಧ ಬ್ಲಾಕ್ ಅಧ್ಯಕ್ಷರುಗಳು, ಕಾರ್ಯಕರ್ತರು ಹಾಜರಿದ್ದರು.