ಶಾಕ್ತ-ಶಾಸ್ತçದಲ್ಲಿ ದೇವೀಮಹಾತ್ಮೆಯು ಲೋಕೋತ್ತರವಾದ ಗ್ರಂಥ. ಇದಕ್ಕೆ “ದುರ್ಗಾಸಪ್ತಶತೀ' ಎಂಬ ಹೆಸರೂ ಇದೆ. ವಂಗದೇಶದಲ್ಲAತೂ ‘‘ಶ್ರೀಶ್ರೀಚಂಡೀ” ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಹೊಂದಿ ಅಲ್ಲಿನ ಶಾಕ್ತರಿಗೆ ಗೀತೆಯಂತೆಯೇ ಪರಮಪೂಜ್ಯವಾಗಿದೆ. ದೇವೀಮಹಾತ್ಮೆಯು ಮಾರ್ಕಂಡೇಯ ಪುರಾಣದ ೧೩ ಅಧ್ಯಾಯಗಳ ವಿಷಯವಾಗಿದೆ. ದೇವಿ ಮಹಾತ್ಮೆಯನ್ನು ಮೂರು ಚರಿತ್ರೆಗಳಾಗಿ ವಿಭಾಗಿಸಲಾಗಿದ್ದು, ಈ ಕುರಿತು ಸಂಕ್ಷಿಪ್ತ ಹಿನ್ನೆಲೆ ಈ ಕೆಳಗಿನಂತಿದೆ.

ಮಹಾಕಾಳಿಗೆ ಸಂಬAಧಿಸಿದ ಪ್ರಥಮ ಚರಿತ್ರವು ಮೊದಲನೆಯ ಅಧ್ಯಾಯದಲ್ಲಿ ಅಡಕವಾಗಿದೆ. ಮಹಾಲಕ್ಷಿö್ಮಗೆ ವಿನಿಯೋಗಿಸಲ್ಪಟ್ಟಿರುವ ದ್ವಿತೀಯಚರಿತ್ರವು ಮುಂದಿನ ಮೂರು ಅಧ್ಯಾಯಗಳಲ್ಲಿ ಬರುತ್ತದೆ. ಮಹಾಸರಸ್ವತಿಗೆ ನಿವೇದಿಸಲ್ಪಟ್ಟಿರುವ ತೃತೀಯ ಚರಿತ್ರವು ಉಳಿದ ಅಧ್ಯಾಯಗಳನ್ನು ಒಳಗೊಂಡಿದೆ.

ಪ್ರಥಮ ಚರಿತ್ರೆ

ಕಲ್ಪಾಂತರದಲ್ಲಿ ಜಗತ್ತೆಲ್ಲ ಜಲಮಯವಾಗಿರಲು ಭಗವಂತನಾದ ಶ್ರೀಮನ್ನಾರಾಯಣನು ಆದಿಶೇಷನ ಶಯನದ ಮೇಲೆ ಯೋಗನಿದ್ರೆಯನ್ನು ಹೊಂದಿದನು. ಆಗ ಮಧು-ಕೈಟಭರೆಂಬ ಅಸುರರು ವಿಷ್ಣುವಿನ ಕರ್ಣಮಲದಿಂದ ಉದ್ಭೂತರಾಗಿ ಕರ್ತೃವಾದ ಬ್ರಹ್ಮನನ್ನು ಕೊಲ್ಲಲು ಪ್ರಯತ್ನಿಸಿದರು. ಆಗ ಬ್ರಹ್ಮನು ವಿಷ್ಣುವನ್ನು ಎಚ್ಚರಗೊಳಿಸಲು ಅವನ ಕಣ್ಣುಗಳಲ್ಲಿದ್ದ ಯೋಗನಿದ್ರೆಯನ್ನು ಪ್ರಾರ್ಥಿಸಿದನು. ಆಗ ತಾಮಸೀ ರಾತ್ರಿಯಾದ ಯೋಗನಿದ್ರೆಯು ವಿಷ್ಣುವನ್ನು ಎಚ್ಚರಗೊಳಿಸಿ ಅವನ ಮೂಲಕ ಮಧು-ಕೈಟಭರನ್ನು ನಾಶಮಾಡಿಸಿದಳು. ಆದುದರಿಂದ ದೇವಿಗೆ ಮಧು-ಕೈಟಭನಾಶಿನಿಯೆಂಬ ಹೆಸರು ಬಂದಿದೆ.

ದ್ವಿತೀಯ ಚರಿತ್ರೆ

ಆಸುರೇಶ್ವರನಾದ ಮಹಿಷಾಸುರನು ದೇವಸೈನ್ಯವನ್ನು ಸೋಲಿಸಿ, ಇಂದ್ರ ಪದವಿಯನ್ನು ಪÀಡೆದನು. ಆಗ ಪರಾಜಿತರಾದ ದೇವತೆಗಳು ಬ್ರಹ್ಮನನ್ನು ಮುಂದೆ ಮಾಡಿಕೊಂಡು ಹರಿ-ಹರರು ಇದ್ದಲ್ಲಿಗೆ ಬಂದರು. ಇವರು ದೇವತೆಗಳ ಅವಮಾನ-ಪರಾಜಯಗಳನ್ನು ಕೇಳಿದ ಕೂಡಲೆ ಅತ್ಯಂತವಾಗಿ ಕೋಪಗೊಂಡರು. ಅನಂತರ ಅತಿ ಕೋಪಪೂರ್ಣರಾದ ಹರಿ-ಹರ ಬ್ರಹ್ಮರ ಮುಖಗಳಿಂದಲೂ ಇತರ ದೇವತೆಗಳ ಶರೀರದಿಂದಲೂ ಮಹತ್ತಾದ ಒಂದು ತೇಜಃಪುಂಜವು ಹೊರಗೆ ಬಂದಿತ್ತು. ಅತುಲವಾದ ಆ ತೇಜಃಪುಂಜವು ಒಂದು ನಾರಿಯ ಆಕಾರವನ್ನು ತಾಳಿ, ದಿಗಂತವನ್ನು ವ್ಯಾಪಿಸಿಕೊಂಡಿತು. ಭಿನ್ನ-ಭಿನ್ನ ದೇವತೆಗಳ ತೇಜಸ್ಸುಗಳು ಮಹಾನಾರಿಯ ಅಂಗಗಳಾದುವು: ಶಾಂಭವ ತೇಜಸ್ಸು ಅವಳ ಮುಖವಾಯಿತು; ವೈಷ್ಣವ ತೇಜಸ್ಸು ಅವಳ ಬಾಹುಗಳಾದವು, ಬ್ರಹ್ಮ ತೇಜಸ್ಸಿನಿಂದ ಅವಳ ಪಾದಗಳಾದುವು. ಹೀಗೆಯೇ ಯಮ, ಸೋಮ, ಇಂದ್ರ, ವರುಣ ಇವರ ತೇಜಸ್ಸುಗಳಿಂದ ಕೂದಲು, ಸ್ತನ, ನಡು, ಮೊಣಕಾಲು ಮೊದಲಾದ ಅಂಗಗಳಾದುವು. ಅನಂತರ ಜಯಾರ್ಥಿಗಳಾದ ದೇವತೆಗಳು ತಮ್ಮ-ತಮ್ಮ ಆಯುಧಗಳನ್ನು ಆ ದೇವತೆಗೆ ಕೊಟ್ಟರು. ಈ ದೇವಿಯೇ ಮಹಾಲಕ್ಷಿö್ಮÃ. ಇವಳ ಘೋರ ಗರ್ಜನೆಯಿಂದ ಲೋಕಗಳು ಕಂಪನ ಗೊಂಡವು. ಅನಂತರ ಸರ್ವೇಶ್ವರಿಯೂ ಜಗನ್ಮಾತೆಯೂ ಆದ ದೇವಿಯು ರಾಕ್ಷಸ ನಾಯಕರನ್ನೆಲ್ಲ ವಧಿಸಿ, ತನ್ನ ಪಾದದಿಂದ ಮಹಿಷಾಸುರನನ್ನು ಆಕ್ರಮಿಸಿಕೊಂಡು ಶೂಲದಿಂದ ಪ್ರಹರಿಸಿ ಆತನನ್ನು ಮಹಿಷ ಶರೀರದಿಂದ ಮುಕ್ತನನ್ನಾಗಿ ಮಾಡಿದಳು. ಆಗ ಸಮಸ್ತ ಜೀವಿಗಳೂ ಜಯಘೋಷವನ್ನು ಮಾಡಿದವು, ಮಹಿಷಾಸುರನ ವಧೆಯಾದ ಮೇಲೆ ಇಂದ್ರಾದಿದೇವತೆಗಳೆಲ್ಲ ದೇವಿಯನ್ನು ಸ್ತುತಿಸಿದರು. ಪ್ರಸನ್ನಳಾದ ದೇವಿಯು ದೇವತೆಗಳು ಸ್ಮರಿಸಿಕೊಂಡಾಗಲೆಲ್ಲ ತಾನು ಬಂದು ಅವರ ಕಷ್ಟಗಳನ್ನು ಪರಿಹರಿಸುವುದಾಗಿಯೂ, ಭಕ್ತಜನರನ್ನು ಅನುಗ್ರಹಿಸುವುದಾಗಿಯೂ ಮಾತು ಕೊಟ್ಟು ಅದೃಶ್ಯಳಾದಳು.

ತೃತೀಯ ಚರಿತ್ರೆ

ಶುಂಭ, ನಿಶುಂಭ ಎಂಬ ಅಸುರರು ತಮ್ಮ ಪರಾಕ್ರಮದಿಂದ ಇಂದ್ರನ ಅಧಿಕಾರವನ್ನೂ ದೇವತೆಗಳ ಹವಿರ್ಭಾಗಗಳನ್ನೂ ಅಪಹರಿಸಿದ್ದರು, ಅಯೋನಿಜೆಯಾದ ಕನ್ಯೆಯಿಂದ ಹೊರತು ಮತ್ತೆ ಯಾರಿಂದಲೂ ಮೃತ್ಯುವು ಸಂಭವಿಸುವುದಿಲ್ಲವೆAಬ ಬ್ರಹ್ಮನ ವರವೂ ಇದ್ದಿತು. ಇಂಥ ಆಪತ್ತಿಗೆ ಗುರಿಯಾದ ದೇವತೆಗಳೆಲ್ಲರೂ ‘ಆಪತ್ತಿನಲ್ಲಿರುವಾಗ ನನ್ನನ್ನು ಸ್ಮರಿಸಿ, ಆ ಕ್ಷಣದಲ್ಲಿಯೇ ನಿಮ್ಮ ಆಪತ್ತುಗಳನ್ನು ನಾಶಮಾಡುತ್ತೇನೆ' ಎಂಬ ದೇವಿಯ ವರವನ್ನು ಸ್ಮರಿಸಿಕೊಂಡು ಹಿಮಾಲಯಕ್ಕೆ ಹೋಗಿ ವಿಷ್ಣುಮಾಯೆಯಾದ ದೇವಿಯನ್ನು ಸ್ತುತಿಸಿದರು. ಆಗ ಪಾರ್ವತಿಯು ಜಾಹ್ನವೀ ಜಲದಲ್ಲಿ ಸ್ನಾನ ಮಾಡಲು ಬಂದು ದೇವತೆಗಳಿಗೆ ಪ್ರತ್ಯಕ್ಷಳಾದಳು. ಪಾರ್ವತಿಯ ಶರೀರ ಕೋಶದಿಂದ ಹಾಗೂ ಸರಸ್ವತಿಯ ಶಕ್ತಿಯಿಂದ ಅತೀವ ಸುಂದರಿಯೂ ಮಂಗಳಮೂರ್ತಿಯೂ ಆದ ದೇವಿಯು ಉದ್ಭವಿಸಿದಳು. ಶರೀರ ಕೋಶದಿಂದ ಹುಟ್ಟಿದುದರಿಂದ ಕೌಶಿಕೀ ಎಂಬ ಹೆಸರು ಬಂದಿತು, ದೇವಿಯ ಲಾವಣ್ಯದಿಂದ ಮೋಹಿತನಾದ ಶುಂಭಾಸುರನು ಅವಳನ್ನು ಕರೆತರಲು ತನ್ನ ದೈತ್ಯರನ್ನು ಕಳುಹಿಸಿದನು. ಅವರಾರೂ ಜೀವದಿಂದ ಹಿಂತಿರುಗಲಿಲ್ಲ. ಮೊದಲು ಧೂಮ್ರಲೋಚನನೆಂಬ ದಂಡಾಧಿಕಾರಿಯು ದೇವಿಯ ಹುಂಕಾರದಿAದಲೇ ಭಸ್ಮೀಭೂತನಾದನು. ಅನಂತರ ದೇವಿಯ ಲಲಾಟದಿಂದ ಉದ್ಭವಿಸಿದ ಕಾಳೀದೇವಿಯಿಂದ ಚಂಡ-ಮುAಡರು ನಾಶವಾದರು. ಚಂಡ ಮುಂಡರನ್ನು ವಧಿಸಿದ್ದರಿಂದ ಕಾಳಿಗೆ ಚಾಮುಂಡೀ ಎಂಬ ಹೆಸರು ಬಂದಿತು. ಅನಂತರ ರಕ್ತಬೀಜ, ಶುಂಭ, ನಿಶುಂಭ ಇವರೆಲ್ಲರೂ ದೇವಿಯಿಂದ ಹತರಾದರು. ಶುಂಭನು ಮಡಿಯುವುದಕ್ಕೆ ಮೊದಲು ಅಸುರರೆಲ್ಲ ದೇವಿಯ ಶಕ್ತಿಗಳಾದ ಶಿವದೂತೀ, ಕೌಮಾರೀ, ಬ್ರಹ್ಮಾಣೀ, ಮಾಹೇಶ್ವರೀ, ವೈಷ್ಣವೀ ಮೊದಲಾದ ಮಾತೃಕೆಗಳಿಂದ ಮಡಿದರು. ಆದರೆ ಶುಂಭÀನನ್ನು ಕೊಲ್ಲಲು ದೇವಿಯು ತನ್ನ ಶಕ್ತಿಗಳನ್ನೆಲ್ಲ ತನ್ನಲ್ಲಿಯೇ ಉಪಸಂಹರಿಸಿ ಕೊಂಡು ತಾನೊಬ್ಬಳೇ ನಿಂತಳು. ದೇವಿಯು ಅದ್ವಿತೀಯಳೆಂಬುದು ಆ ದೈತ್ಯನಿಗೆ ತಿಳಿದಿರಲಿಲ್ಲ.

ದೇವಿಯ ಶೂಲಾಗ್ರದಿಂದ ಶುಂಭನು ಹತನಾದ. ದೇವತೆಗಳು ದೇವಿಯ ಅನುಪಮಶಕ್ತಿಯನ್ನೂ, ಮಾತೃ ಹೃದಯವನ್ನೂ ಕೊಂಡಾಡುತ್ತಾರೆ. ಅನಂತರ ದೇವಿಯು ದೇವತೆಗಳನ್ನೆಲ್ಲ ಪುನಃ ಅನುಗ್ರಹಿಸಿ ತನ್ನ ಮುಂದಿನ ಅವತಾರಗಳ ಕುರಿತು ತಿಳಿಸುತ್ತಾಳೆ.

ದೇವಿಯು ವಿಶ್ವೇಶ್ವರೀ, ಜಗದ್ಧಾತ್ರಿ; ಉತ್ಪತ್ತಿ ಸ್ಥಿತಿಲಯಗಳಿಗೆ ಕಾರಣಳು; ಇವಳೇ ಸ್ವಾಹಾ-ಸ್ವಧಾ-ವಷಟ್ ಮೊದಲಾದ ಮಂತ್ರಗಳ ಸ್ವರೂಪಳು, ಅ ಉ ಮ ಎಂಬ ಮೂರು ಮಾತ್ರೆಗಳ ಸ್ವರೂಪಳು. ಹ್ರಾಂ ಹ್ರೀಂ ಹ್ರೂಂ ಹ್ರೆöÊಂ ಹ್ರೋಂ ಮಂತ್ರ ಸ್ವರೂಪಳು. ಇವಳೇ ಮಹಾವಿದ್ಯೆಯೂ ಮಹಾ ಮೋಹಳೂ ಆಗಿರುತ್ತಾಳೆ. ಇವಳೇ ಸರ್ವಕ್ಕೂ ಕಾರಣಳಾಗಿ ಗುಣತ್ರಯವನ್ನು ಕಾರ್ಯರೂಪಕ್ಕೆ ತಂದಿರುತ್ತಾಳೆ. ಇವಳೇ ಕಾಳರಾತ್ರಿ, ಮಹಾರಾತ್ರಿ ಮತ್ತು ಮೋಹರಾತ್ರಿ. ಬುದ್ಧಿಯ ವೃತ್ತಿಗಳೆಲ್ಲ ದೇವಿಯ ರೂಪಗಳೇ. ನಾನಾ ಆಯುಧಗಳನ್ನು ಧರಿಸಿ ಭಯಂಕರಳಾಗಿ ಕಂಡುಬAದರೂ, ಜಗನ್ಮಾತೆಯು ಸೌಮ್ಯಸ್ವರೂಪಳು. ಜಗತ್ತಿನಲ್ಲಿರುವ ಸೌಮ್ಯ ವಸ್ತುಗಳಿಗಿಂತಲೂ ಸೌಮ್ಯತರಳು. ಅತಿ ಸುಂದರಿಯು, ಪರಾಪರಗಳನ್ನೂ ಮೀರಿರುವ ಪರಮೇಶ್ವರಿಯೂ ಆಗಿದ್ದಾಳೆ. ದೇವಿಯು ವಿಮಲವಾದ ವೇದಗಳಾಗಿದ್ದರೂ, ಶಬ್ದಬ್ರಹ್ಮಸ್ವರೂಪಳಾಗಿದ್ದರೂ ಜಗತ್ತಿನ ಯೋಗಕ್ಷೇಮಗಳಿಗೆ ಸಾಧನವಾದ ಲೌಕಿಕ ವಿದ್ಯೆಯೂ ಆಗಿದ್ದಾಳೆ. ದುರ್ಗಮವಾದ ಭವಸಾಗರವನ್ನು ದಾಟಿಸುವ ಅಸಂಗವಾದ ನೌಕೆಯು ದುರ್ಗಾದೇವಿ. ದೇವಿಯು ಸಮಸ್ತ ಪ್ರಾಣಿಗಳ ಚೇತನ, ಬುದ್ಧಿ, ನಿದ್ರೆ, ಹಸಿವು ಛಾಯೆ, ಶಕ್ತಿ, ಬಾಯಾರಿಕೆ, ಕ್ಷಮೆ, ಧರಿತ್ರಿ, ಲಜ್ಜೆ, ಶಾಂತಿ, ಶ್ರದ್ಧೆ, ಲಕ್ಷಿö್ಮ, ಧೃತಿ, ವೃತ್ತಿ ಸ್ಮೃತಿ, ದಯೆ, ನೀತಿ, ತುಷ್ಟಿ, ಮಾತೃ, ಭ್ರಾಂತಿ, ಇಂದ್ರಿಯಗಳ ಅಧಿಷ್ಠಾತ್ರಿ ಇವುಗಳಾಗಿರುತ್ತಾಳೆ. ಎಂಬದು ಸಪ್ತಶತಿಯಲ್ಲಿ ಬರುವ ಶ್ಲೋಕಗಳ ಒಟ್ಟು ಸಾರಾಂಶವಾಗಿದೆ.