ಮಡಿಕೇರಿ, ಸೆ. ೨೩ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಹಲವು ವರ್ಷಗಳಿಂದ ಕೊಡವ ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ ನಡೆಸಿದೆ.

೨೦೨೨ ರಲ್ಲಿ ಸಮಗ್ರ ಮಾಹಿತಿಯನ್ನು ಒಳಗೊಂಡ ಮನವಿಯನ್ನು ಅಕಾಡೆಮಿ ವತಿಯಿಂದ ಕಳುಹಿಸಿಕೊಡಲಾಗಿದೆ. ಸಮಗ್ರ ಮಾಹಿತಿಯನ್ನು ಒಳಗೊಂಡ ಈ ದಾಖಲೆಯಲ್ಲಿ ವಿಷಯ ಪ್ರಸ್ತಾವನೆಯಲ್ಲದೆ ಕೊಡವ ಭಾಷೆಯಲ್ಲಿರುವ ಕೊಡವ ಲಿಪಿ, ಕೊಡವ ವ್ಯಾಕರಣ, ಕೊಡವ ಶಬ್ಧಕೋಶ, ಸಂಶೋಧನೆ, ದಾಖಲೀಕರಣ, ಚಲನಚಿತ್ರ, ವಸ್ತುಸಂಗ್ರಹಾಲಯ, ಚಾನೆಲ್, ಪತ್ರಿಕೆಗಳು, ಧಾರವಾಹಿ, ಸಾಕ್ಷö್ಯಚಿತ್ರ, ಕೊಡವ ಭಾಷೆಯನ್ನು ಶಾಲೆಯಲ್ಲಿ, ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಇರುವ ಪಠ್ಯಕ್ರಮ, ಕೊಡವ ಅಧ್ಯಯನ ಪೀಠ ಹೀಗೆ ಸುಮಾರು ೧೫೦ ಪುಟಗಳನ್ನು ಒಳಗೊಂಡAತ ದಾಖಲೆಯನ್ನು ನೀಡಲಾಗಿದೆ.

ಈ ಹೊಸ ದಾಖಲೆಗಳನ್ನು ಹಾಗೂ ಹಳೆಯ ದಾಖಲೆಗಳನ್ನು ಸೇರಿಸಿ ಮನವಿ ಪತ್ರದೊಡನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್‌ಕುಮಾರ್ ಅವರಿಗೂ, ಲೋಕಸಭಾ ಸದಸ್ಯ ಪ್ರತಾಪ್‌ಸಿಂಹ ಅವರಿಗೂ, ಸೆಂಟ್ರಲ್ ಇನ್ಸ್ಟಿಟ್ಯೂಷನ್ ಆಫ್ ಲ್ಯಾಂಗ್‌ವೇಜ್‌ನ ನಿರ್ದೇಶಕರಿಗೂ ತಾ. ೨೨ ರಂದು ಸಲ್ಲಿಸಲಾಯಿತು. ಅಲ್ಲದೆ ಕೊಡಗಿನ ಎಲ್ಲಾ ಶಾಸಕರಿಗೂ ಈ ಮನವಿಯನ್ನು ಸಲ್ಲಿಸಲಾಗಿದೆ. ಮನವಿ ಸಲ್ಲಿಸಿದ ಸಂದರ್ಭ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಸದಸ್ಯರಾದ ಮಾಚಿಮಾಡ ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಕುಡಿಯರ ಮುತ್ತಪ್ಪ, ನಾಗೇಶ್ ಕಾಲೂರು, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ ಮತ್ತು ಚಾಮೇರ ದಿನೇಶ್ ಬೆಳ್ಯಪ್ಪ ಹಾಜರಿದ್ದರು.