ಮಡಿಕೇರಿ, ಸೆ. ೨೨: ಕೈಗಾರಿಕೆಯಲ್ಲಿ ತೊಡಗಲು ಆಸಕ್ತಿ ಇರುವ ಯುವ ಜನರಿಗೆ ಹಾಗೂ ಈಗಾಗಲೇ ಕೈಗಾರಿಕೆಯಲ್ಲಿ ತೊಡಗಿಸಿ ಕೊಂಡವರಿಗೆ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಮಾರ್ಗದರ್ಶನ ಹಾಗೂ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಸಿ.ವಿ. ನಾಗೇಶ್ ಅವರು ತಿಳಿಸಿದರು.

ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ನಿಯಮಿತ ೨೦೨೧- ೨೨ನೇ ಸಾಲಿನ ೨೮ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುವ ಜನರು ಸ್ವ-ಉದ್ಯೋಗ ಕೈಗೊಳ್ಳುವತ್ತ ಗಮನಹರಿಸಬೇಕು. ಸ್ವ-ಉದ್ಯೋಗ ಕೈಗೊಳ್ಳುವಲ್ಲಿ ನಿಷ್ಠೆ ಶ್ರದ್ಧೆ ಇದ್ದಲ್ಲಿ ಯಶಸ್ಸು ಪಡೆಯಬಹುದು. ಆ ನಿಟ್ಟಿನಲ್ಲಿ ಯುವ ಜನರು ದೂರದೃಷ್ಟಿ ಹೊಂದಿರಬೇಕು ಎಂದು ಸಿ.ವಿ. ನಾಗೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ವಿಸ್ತೀರ್ಣ ಹಾಗೂ ಜನಸಂಖ್ಯೆ ಕಡಿಮೆ ಇರುವುದರಿಂದ ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆ ಕಷ್ಟವಾಗಿದೆ. ಆದರೂ ಇರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರ ಬೆಳವಣಿಗೆಗೆ ಶ್ರಮಿಸಬೇಕು ಎಂದರು. ಪ್ರಸ್ತುತ ದಿನದಲ್ಲಿ ಆಕರ್ಷಕ ಉತ್ಪನ್ನಗಳಿಗೆ ಜನರು ಮತ್ತಷ್ಟು ಆಕರ್ಷಿತರಾಗಿದ್ದಾರೆ.

ಈ ರೀತಿಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಆ ನಿಟ್ಟಿನಲ್ಲಿ ಕೈಗಾರಿಕೆಯಲ್ಲಿ ತೊಡಗಿಕೊಂಡು ಬೆಳೆಯು ವಂತಾಗಬೇಕು ಎಂದರು.

ಕೈಗಾರಿಕೆಯಲ್ಲಿ ಬೆಳವಣಿಗೆ ಆರಂಭದಲ್ಲಿ ಹಲವು ಏರಿಳಿತಗಳನ್ನು ಎದುರಿಸಬೇಕಿದೆ. ಯಾವುದಕ್ಕೂ ಎದೆಗುಂದದೆ ಮುನ್ನಡೆಯುವ ಛಲ ಮತ್ತು ಗುರಿ ಇದ್ದಲ್ಲಿ ಉದ್ಯಮಿ ಆಗಲು ಸಾಧ್ಯ ಎಂದು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರು ನುಡಿದರು. ದೊಡ್ಡ ಆಲೋಚನೆ ಗಳಿಂದ ಕೈಗಾರಿಕೆಯಲ್ಲಿ ದೊಡ್ಡ ಮಟ್ಟದ ಉನ್ನತಿ ಸಾಧಿಸಬಹುದು. ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲ ಬಳಕೆ ಕಡಿಮೆಯಾಗಿದೆ, ಯತ್ರೋಪಕರಣಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಕಾಣಬಹುದು ಎಂದು ಅವರು ಹೇಳಿದರು.

ಕೈಗಾರಿಕೆಯಲ್ಲಿ ತೊಡಗಿ ಕೊಂಡವರು ತಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಇದರಿಂದ ಮತ್ತೊಬ್ಬರಿಗೆ ಸ್ಪೂರ್ತಿದಾ ಯಕವಾಗುತ್ತದೆ. ಕೈಗಾರಿಕಾ ಕ್ಷೇತ್ರದಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಕೂಡ ಬಹಳ ಜಾಗರೂಕತೆಯಿಂದ ಇಡಬೇಕು.

ಕೈಗಾರಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಪ್ರಸ್ತುತ ಕಾಣಬಹುದಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದು ಸಿ.ವಿ. ನಾಗೇಶ್ ಸಲಹೆ ಮಾಡಿದರು.

ಸಭೆಯಲ್ಲಿ ೨೦೨೧-೨೨ನೇ ಸಾಲಿನ ಮಹಾಸಭೆ ನಡವಳಿ ಓದಿದರು. ಆಡಳಿತ ಮಂಡಳಿಯ ವರದಿ, ಲೆಕ್ಕ ಪರಿಶೋಧನಾ ವರದಿ, ಬೈಲಾ ತಿದ್ದುಪಡಿ ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಂಘದ ವತಿಯಿಂದ ಉತ್ಪಾದಕರು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು ಅಥವಾ ಮಾರಾಟ ಮಳಿಗೆಗಳನ್ನು ನಿರ್ಮಿಸಿ ಕೊಡುವಂತೆ ಸದಸ್ಯರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ಆ್ಯನಿ ಫಾತಿಮಾ, ನಿರ್ದೇಶಕ ಸಿ.ಎಂ. ಯಶವಂತ್, ಎ. ಜೇಕಬ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ಇತರರು ಇದ್ದರು. ದೀಕ್ಷಾ ಮತ್ತು ತಂಡದವರು ಪ್ರಾರ್ಥಿಸಿದರು, ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಎಂ.ಜಿ. ಸ್ವಾತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.