ಮಡಿಕೇರಿ, ಸೆ. ೨೧: ಕೊಡಗು ಜಿಲ್ಲೆಯಲ್ಲಿ ಸಿ ಮತ್ತು ಡಿ ವರ್ಗದ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಜಮೀನು ಮಂಜೂರಾತಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಇಲಾಖಾ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಮಂಡಿಸಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಸಿ ಮತ್ತು ಡಿ ವರ್ಗದ ಜಮೀನಿನಲ್ಲಿ ಕಳೆದ ೫೦-೬೦ ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಮಂಜೂರಾತಿಗಾಗಿ ಫಾರಂ ನಂ. ೫೦, ೫೩, ೫೭ರಲ್ಲಿ ರೈತರು ಅರ್ಜಿ ಸಲ್ಲಿಸಿರುವದು ಸರಕಾರದ ಗಮನಕ್ಕೆ ಬಂದಿದೆಯೇ? ಜಾಗ ಮಂಜೂರಾತಿ ಆಗದೆ ರೈತರಿಗೆ ತೊಂದರೆ ಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ಶಾಸಕ ರಂಜನ್ ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿರುವ ಸಚಿವ ಅಶೋಕ್ ಅವರು; ಸರಕಾರದ ಆದೇಶ ದಿನಾಂಕ ೫.೬.೨೦೧೭ರನ್ವಯ ಸಲ್ಲ್ಲಿಕೆಯಾದ ಅರ್ಜಿಗಳಿಗೆ ದಿನಾಂಕ ೧೪-೪-೧೯೯೦ಕ್ಕಿಂತ

(ಮೊದಲ ಪುಟದಿಂದ) ಹಿಂದೆ ಒತ್ತುವರಿ ಮಾಡಿದ ಜಮೀನುಗಳಿಗೆ ನಮೂನೆ ೫೦ರಲ್ಲಿ ಮಂಜೂರಾತಿ ಮಾಡಲು ಕ್ರಮ ವಹಿಸಲಾಗುತ್ತಿದೆ. ನಮೂನೆ ೫೭ಕ್ಕೆ ಸಂಬAಧಿಸಿದAತೆ ಸಿ ಮತ್ತು ಡಿ ವರ್ಗದ ಜಮೀನಿನಲ್ಲಿ ಮಂಜೂರು ಮಾಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಆದರೆ, ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಹಾರಂಗಿ ಜಲಾಶಯ ಯೋಜನೆಯಡಿ ಮುಳುಗಡೆ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸುವ ಸಂಬAಧ ೩,೯೦೦ ಎಕರೆ ಮೀಸಲು ಅರಣ್ಯವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿದ ಬದಲಿಗೆ ೧೮೦೦೦ ಎಕರೆ ಸರಕಾರಿ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸುವ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಆದೇಶದಂತೆ ಕ್ರಮ ವಹಿಸುವ ಸಲುವಾಗಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಸಿ ಮತ್ತು ಡಿ ವರ್ಗದ ಜಮೀನುಗಳನ್ನು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮೂಲಕ ಗುರುತಿಸಿದ ಒತ್ತುವರಿ ಮುಕ್ತ ಒಟ್ಟು ೨೮ ಸ.ನಂ.ಗಳಲ್ಲಿ ಒಟ್ಟು ೬೦೨೭.೭೦ ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ಖಾತೆ ಮಾಡಲಾಗಿದೆ. ಆ ಜಮೀನುಗಳನ್ನು ಹೊರತುಪಡಿಸಿ ಉಳಿದ ಸಿ ಮತ್ತು ಡಿ ವರ್ಗದ ಜಮೀನಿನಲ್ಲಿ ಸಕ್ರಮ ಕೋರಿ ಸಲ್ಲಿಸಿದ ಜಮೀನುಗಳನ್ನು ಮಂಜೂರು ಮಾಡುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.