ಸೋಮವಾರಪೇಟೆ,ಸೆ.೨೦: ನೇಣು ಬಿಗಿದುಕೊಂಡು ವಿವಾಹಿತ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾದಾಪುರ ಸಮೀಪದ ಜಂಬೂರು ಬಾಣೆ ಗ್ರಾಮದಲ್ಲಿ ನಡೆದಿದೆ. ಜಂಬೂರು ಬಾಣೆ ನಿವಾಸಿ ಕೂಲಿ ಕಾರ್ಮಿಕ ಗಣೇಶ್(ಕಟ್ಟಿ-೪೮) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ಘಟನೆಗೆ ಅನಾರೋಗ್ಯ ಕಾರಣ ಎಂದು ಸಂಶಯಿಸಲಾಗಿದೆ.
ನಿನ್ನೆ ರಾತ್ರಿ ಮನೆಯ ಹಿಂಭಾಗವಿರುವ ಕೊಠಡಿಯ ಮೇಲ್ಛಾವಣಿಗೆ ಅಳವಡಿಸಿದ್ದ ಕಬ್ಬಿಣದ ಪೈಪ್ಗೆ ವೇಲ್ನಿಂದ ನೇಣುಬಿಗಿದು ಕೊಂಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಪತ್ನಿ ಸುಮಿತ್ರ ಅವರು ಗಮನಿಸಿದ್ದು, ತಕ್ಷಣ ಕತ್ತಿಯಿಂದ ವೇಲ್ನ್ನು ತುಂಡರಿಸಿದ್ದಾರೆ. ಅಷ್ಟರಲ್ಲಾಗಲೇ ಗಣೇಶ್ ಅವರು ಮೃತಪಟ್ಟಿದ್ದರು.
ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಣೇಶ್ ಅವರು, ಕೂಲಿ ಮಾಡಿ ಕುಟುಂಬ ನಿರ್ವಹಿಸುತ್ತಿದ್ದರು. ಇವರ ಓರ್ವ ಪುತ್ರ ವಿಶೇಷಚೇತನನಾಗಿದ್ದು, ಹಾಸಿಗೆ ಹಿಡಿದಿದ್ದಾನೆ. ಸೋಮವಾರಪೇಟೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿ ಸಲಾಯಿತು. ಮೃತ ಗಣೇಶ್ ಪತ್ನಿ ಸೇರಿದಂತೆ ಪುತ್ರ ಹಾಗೂ ೭ಪುತ್ರಿಯರನ್ನು ಅಗಲಿದ್ದಾರೆ.