ವಿಧಾನಸಭಾ ಚುನಾವಣೆಯಲ್ಲಿ ಬಹಿರಂಗ ಬೆಂಬಲ ಸಾಧ್ಯತೆ
ಮಡಿಕೇರಿ, ಸೆ. ೧೯ : ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಜಿಲ್ಲೆಯಲ್ಲಿ ರಾಜಕಾರಣದ ಕಾವು ಕೂಡ ಏರ ತೊಡಗಿದೆ. ರಾಜಕೀಯವಾಗಿ ಮಹತ್ವದ ಬೆಳವಣಿಗೆಗಳು ಕೂಡ ನಡೆಯುತ್ತಿವೆ. ಇದೀಗ ಜಾತ್ಯತೀತ ಜನತಾ ದಳದ ಕಾರ್ಯಾಧ್ಯಕ್ಷರಾಗಿ, ವಿಧಾನಪರಿಷತ್ತು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಮೇರಿಯಂಡ ಸಂಕೇತ್ ಪೂವಯ್ಯ ‘ಕೈ' ಪಾಳಯದ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಗಳು ದಟ್ಟವಾಗಿವೆ.
ರಾಜಕಾರಣದಿಂದ ಭ್ರಮನಿರಸನಗೊಂಡ ಸಂಕೇತ್ ಕಳೆದ ನಾಲ್ಕು ವರ್ಷಗಳಿಂದ ರಾಜಕೀಯವಾಗಿ ತಟಸ್ಥವಾಗಿ ಉಳಿದು ಸಾಮಾಜಿಕ ಕಾರ್ಯ ನಡೆಸುತ್ತ ಮುನ್ನಡೆಯುತ್ತಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ರಾಜಕೀಯವಾಗಿ ಮುನ್ನಲೆಗೆ ಬಂದು ಬಹಿರಂಗವಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸುವ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ೧೧ ಸಾವಿರದಷ್ಟು ಮತಪಡೆದು ಸೋಲುಂಡಿದ್ದ ಸಂಕೇತ್ ಈ ಬಾರಿ ಆ ಮತಗಳನ್ನು ಕಾಂಗ್ರೆಸ್‌ಗೆ ವರ್ಗಾಯಿಸುವ ಕಾರ್ಯತಂತ್ರವನ್ನು ನಡೆಸಲಿದ್ದಾರೆ.
ಈ ಬಗ್ಗೆ ‘ಶಕ್ತಿ'ಯೊಂದಿಗೆ ಮಾತನಾಡಿದ ಸಂಕೇತ್ ಅವರು, ಬಿಜೆಪಿಯಿಂದ ಗೆದ್ದು ಬಂದ ಶಾಸಕರು ಸತತವಾಗಿ ನಾಲ್ಕು ಅವಧಿಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಕೂಡ ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಜಿಲ್ಲೆಯ ಸಮಸ್ಯೆಗೆ ಪರಿಹಾರ ಹುಡುಕಿ ಬದಲಾವಣೆ ತರುತ್ತಾರೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿ ತಾನು ರಾಜಕೀಯದಿಂದ ದೂರ ಉಳಿದಿದ್ದೇನೆ. ವೀರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.ಎಸ್.ಪೊನ್ನಣ್ಣ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರು ಕೊಡಗಿನ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂಬ ಕಾರಣಕ್ಕೆ ತಾನು ಅವರಿಗೆ ಬಹಿರಂಗ ಬೆಂಬಲ ಸೂಚಿಸಲು ನಿರ್ಣಯಿಸಿದ್ದೇನೆ ಆದರೆ, ಕಾಂಗ್ರೆಸ್ ಪಕ್ಷ ಸೇರ್ಪಡೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಬೆಂಬಲ ಸೂಚಿಸುವುದಾದರೆ ಪಕ್ಷ ಸೇರಿ ಸೂಚಿಸಿ ಎಂಬ ಸಲಹೆಗಳು ವ್ಯಕ್ತವಾಗಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರುಗಳು ತನ್ನೊಂದಿಗೆ ಮಾತುಕತೆ ಕೂಡ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಉಳಿದಂತೆ ಜೆ.ಡಿ.ಎಸ್. ಬಲ ವೀರಾಜಪೇಟೆ ವ್ಯಾಪ್ತಿಯಲ್ಲಿ ಕ್ಷೀಣಿಸಿದ್ದು, ಸಂಘಟನೆ ಕೊರತೆ ಎದ್ದು ಕಾಣುತ್ತಿದೆ ಎಂದು ಸಂಕೇತ್ ಹೇಳಿಕೊಂಡಿದ್ದು, ಇತ್ತೀಚಿನ ವಿದ್ಯಮಾನಗಳಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದು ಕಾಂಗ್ರೆಸ್‌ಗೆ ಲಾಭವಾಗಿ ಪರಿಣಮಿಸುತ್ತ ಎಂಬ ಪ್ರಶ್ನೆಯೂ ಉದ್ಭವಿಸಿದೆ. - ಹೆಚ್.ಜೆ. ರಾಕೇಶ್