ಸೋಮವಾರಪೇಟೆ,ಸೆ.೧೮: ಇಲ್ಲಿನ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಸೋಮವಾರಪೇಟೆ ಒಕ್ಕಲಿಗರ ಸೌಹಾರ್ದ ಸಹಕಾರ ಕೂಟ ಎಂಬ ಹೆಸರಿನಲ್ಲಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ತೀರ್ಮಾನ ಕೈಗೊಳ್ಳಲಾಯಿತು.
ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸಂಘದ ಅಧ್ಯಕ್ಷ ಬಿ.ಜೆ. ದೀಪಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಬ್ಯಾಂಕ್ ಸ್ಥಾಪನೆ ಸಂಬAಧ ಚರ್ಚಿಸಿ, ಅಂತಿಮವಾಗಿ ಒಕ್ಕಲಿಗ ಸಮುದಾಯ ಬಾಂಧವರ ಆರ್ಥಿಕ ಪ್ರಗತಿಗಾಗಿ ಸಹಕಾರ ಬ್ಯಾಂಕ್ ಸ್ಥಾಪಿಸುವುದು ಹಾಗೂ ಒಬ್ಬರಿಗೆ ರೂ. ೧೨೫೦ ಷೇರು ಬಂಡವಾಳ ನಿಗದಿಗೊಳಿಸಲು ನಿರ್ಧರಿಸಲಾಯಿತು.
ಕಳೆದ ೨೦೧೩ರಿಂದ ಒಕ್ಕಲಿಗರ ಯುವ ವೇದಿಕೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳನ್ನು ಆಯೋಜಿಸಿ ಎಲೆ ಮರೆಯ ಕಾಯಿಗಳಂತಿದ್ದ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಲಾಗಿದೆ. ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜಿಸುವ ಮೂಲಕ ದೇಶೀಯ ಕ್ರೀಡೆಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಜೆ. ದೀಪಕ್ ತಿಳಿಸಿದರು.
ಇದೇ ಸಂದರ್ಭ ನೂತನ ಸಾಲಿಗೆ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಕೆ.ಬಿ.ಸುರೇಶ್ (ಚಕ್ರವರ್ತಿ), ಉಪಾಧ್ಯಕ್ಷರಾಗಿ ಗೌಡಳ್ಳಿ ಪೃಥ್ವಿ, ಕಾರ್ಯದರ್ಶಿಯಾಗಿ ಚೌಡ್ಲು ಯೋಗೇಂದ್ರ, ಖಜಾಂಚಿಯಾಗಿ ಹಾನಗಲ್ಲುಶೆಟ್ಟಳ್ಳಿ ಪ್ರೀತಂ, ಸಂಘಟನಾ ಕಾರ್ಯದರ್ಶಿಯಾಗಿ ಗೌಡಳ್ಳಿ ಪ್ರಸಿ ಅವರುಗಳನ್ನು ನೇಮಕಗೊಳಿಸಲಾಯಿತು. ಕಳೆದ ೨೦೧೩ರಿಂದ ಸಂಘದಲ್ಲಿ ಸೇವೆ ಸಲ್ಲಿಸಿದ ಬಿ.ಜೆ. ದೀಪಕ್, ನತೀಶ್ ಮಂದಣ್ಣ, ಕೆ.ಟಿ. ದಯಾನಂದ, ವಸಂತ್, ತಿಮ್ಮಯ್ಯ, ಪುರುಷೋತ್ತಮ್, ರಘು, ಪ್ರಕಾಶ್ ಕಲ್ಕಂದೂರು, ಬಳಗುಂದ ಪ್ರಕಾಶ್, ಕಿಶೋರ್, ಅಶೋಕ್, ತ್ರಿವೇಣ್, ಗಿರೀಶ್ ಅವರುಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಒಕ್ಕಲಿಗರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಉದ್ಯಮಿ ಅರುಣ್ ಕೊತ್ನಳ್ಳಿ, ಪ್ರಮುಖರಾದ ಕೂತಿ ದಿವಾಕರ್, ಮೋಹಿತ್, ಗೌತಮ್ ಸೇರಿದಂತೆ ನಿರ್ದೇಶಕರುಗಳು, ಸದಸ್ಯರುಗಳು ಭಾಗವಹಿಸಿದ್ದರು.