ಮಡಿಕೇರಿ, ಸೆ. ೧೯: ಜಾನಪದ ಭಾರತೀಯ ಸಾಹಿತ್ಯದ ಮೂಲ. ಸಾಹಿತ್ಯದ ಆಳ ಅಗಲ ಅಭ್ಯಸಿಸುವ ಮೂಲಕ ಸಾಹಿತ್ಯದ ಅರಿವು ಮೂಡಿಸಿಕೊಳ್ಳಬೇಕು ಎಂದು ಸಂಪಾಜೆ ಎಜುಕೇಶನ್ ಸೊಸೈಟಿಯ ಸಂಚಾಲಕ ಎಂ. ಶಂಕರ ನಾರಾಯಣ ಭಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಂಪಾಜೆ ಸಣ್ಣಯ್ಯ ಪಟೇಲ್ ದತ್ತಿನಿಧಿಯ ಗ್ರಾಮೀಣ ಜಾನಪದ ಸೊಗಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಸಾಹಿತ್ಯ ಪರಿಷತ್ತನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಪ್ರಾರಂಭಿಸಿದ್ದು ಕನ್ನಡಿಗರೆಲ್ಲರೂ ಸದಸ್ಯರಾಗಬೇಕೆಂದು ಮನವಿ ಮಾಡಿದರು. ಗ್ರಾಮೀಣ ಜಾನಪದ ಸೊಗಡು ಕುರಿತು ಮಾತನಾಡಿದ ಶಿಕ್ಷಕ ಡಾ. ಯೋಗೀಶ್ ಬಿ.ಎ. ಜಾನಪದ ಸಾಹಿತ್ಯದಲ್ಲಿ ಪ್ರಪಂಚದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಜಾನಪದ ಒಂದು ದೊಡ್ಡ ಸಾಗರ. ಅದರ ಆಳಕ್ಕಿಳಿದಷ್ಟು ಆಪ್ತವಾಗುತ್ತಾ ಹೋಗುತ್ತದೆ ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಸಾಪದ ಮಾಜಿ ಜಿಲ್ಲಾ ಅಧ್ಯಕ್ಷ ಟಿ.ಪಿ. ರಮೇಶ್ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಮೂಡಬೇಕಾದರೆ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ದತ್ತಿ ಸ್ಥಾಪನೆ ಇದಕ್ಕೊಂದು ಉತ್ತಮ ಪರಿಹಾರ. ದತ್ತಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಮೂಡಿಸಲು ಸಾಧ್ಯ ಎಂದರು. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ, ಸದÀ್ಯದಲ್ಲೆ ಸಂಪಾಜೆ ಹೋಬಳಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನೂತನ ಹೋಬಳಿ ಘಟಕ ಪ್ರಾರಂಭಿಸಲಾಗುವುದು ಎಂದರು. ವೇದಿಕೆಯಲ್ಲಿ ದತ್ತಿದಾನಿಗಳಾದ ಇಂದಿರಾ ದೇವಿ ಪ್ರಸಾದ್, ಸಂಪಾಜೆ ಕಾಲೇಜಿನ ಪ್ರಾಂಶುಪಾಲೆ ಮಾಲತಿ ವೈ.ಕೆ. ಮುಖ್ಯ ಶಿಕ್ಷಕ ಐತ್ತಪ್ಪ, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಜಿಲ್ಲಾ ನಿರ್ದೇಶಕ ಹೆಚ್.ಎಸ್. ಪ್ರೇಮ್ ಕುಮಾರ್ ಇದ್ದರು.

ಕಾರ್ಯಕ್ರಮದಲ್ಲಿ ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಸಂಪಾಜೆ ಹೋಬಳಿಯ ಮಾಜಿ ಅಧ್ಯಕ್ಷ ಲೋಕನಾಥ್ ಅಮೆಚೂರು, ಹೆಚ್.ಜಿ. ಕುಮಾರ್, ಸಾಹಿತಿಗಳಾದ ಗೋಪಾಲ್ ಪೆರಾಜೆ, ಸಂಗೀತಾ ರವಿರಾಜ್, ಡಾ. ಕರುಣಾಕರ, ನಿವೃತ್ತ ಮುಖ್ಯ ಉಪಾಧ್ಯಾಯ ನಾರಾಯಣ ಭಟ್, ಪರಿಷತ್ ಸದಸ್ಯರಾದ ಶ್ರೀಧರ ಹೂವಲ್ಲಿ, ವಿ.ಟಿ ಮಂಜುನಾಥ್, ಹೆಚ್.ಎಸ್ ಟೀನಾ ಚರಣ್ ರಾಜ್, ಸಂಪಾಜೆ ಕಾಲೇಜು ಮತ್ತು ಪ್ರೌಢಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಡಿಕೇರಿ ತಾಲೂಕು ಕಾರ್ಯದರ್ಶಿ ಕೆ.ಯು. ರಂಜಿತ್ ಸ್ವಾಗತಿಸಿ ನಿರೂಪಿಸಿದರು, ಸಾಹಿತಿ ಗೋಪಾಲ್ ಪೆರಾಜೆ ವಂದಿಸಿದರು.