ಮಡಿಕೇರಿ, ಸೆ. ೧೯: ಕನ್ನಡದ ಕಾದಂಬರಿಕಾರ ಡಾ. ಪ್ರಭಾಕರ ಶಿಶಿಲ ಅವರ ಏಳನೆಯ ಕಥಾ ಸಂಕಲನ ಅಲಿಮಾಳ ಆಡು ಸೆಪ್ಟೆಂಬರ್ ೧೪ ರಂದು ಸುಳ್ಯ ತಾಲೂಕಿನ ನಿಂತಿಕಲ್ ಕೆ.ಎಸ್. ಗೌಡ ವಿದ್ಯಾ ಸಂಸ್ಥೆಯಲ್ಲಿ ಬಿಡುಗಡೆಗೊಂಡಿತು.
ಕೃತಿ ಬಿಡುಗಡೆ ಮಾಡಿದ ವಿದ್ಯಾಸಂಸ್ಥೆಯ ಸಂಚಾಲಕ ಕುಮಾರಸ್ವಾಮಿ ಮಾತನಾಡಿ “ಇದು ಧರ್ಮ ಸಮನ್ವಯದ ಆಶಯವುಳ್ಳ ಅಪೂರ್ವ ಕಥಾ ಸಂಕಲನ. ಕೃತಿಕಾರ ಶಿಶಿಲರು ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ ತಮ್ಮದೇ ನೆಲೆಯಲ್ಲಿ ಅಪಸತ್ಯಗಳಿಗೆ ಉತ್ತರ ನೀಡಿದ್ದಾರೆ” ಎಂದರು.
ಕೃತಿಯ ಬಗ್ಗೆ ಮಾತನಾಡಿದ ವಾಗ್ಮಿ ಶಶಿಧರ ಪಳಂಗಾಯ ಶೋಷಿತರ ಪರವಾಗಿ ಮಾತಾಡುವ ಇವರ ಕೃತಿ ಭರವಸೆಯ ಬೆಳಕನ್ನು ತೋರಿಸುತ್ತದೆ. ಕನ್ನಡಿಗರು ಇಂತಹ ಲೇಖಕರನ್ನು ಪ್ರೋತ್ಸಾಹಿಸಬೇಕು” ಎಂದು ಕರೆ ನೀಡಿದರು.
ಕೃತಿಕಾರ ಶಿಶಿಲರು “ಪ್ರಜಾಪ್ರಭುತ್ವದ ಮೇಲಾಗುವ ಹಲ್ಲೆಗಳಿಂದ ತಲ್ಲಣಗೊಂಡು ಈ ಕತೆಗಳನ್ನು ಬರೆದಿದ್ದೇನೆ. ವಾಸ್ತವವಾದವೇ ಇವುಗಳ ನೆಲೆಗಟ್ಟು” ಎಂದರು.
ಪAಜ ಪಂಚಶ್ರೀ ಜೇಸಿಸ್ನ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ ಜರುಗಿದ ಈ ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷ ಶಿವಪ್ರಸಾದ ಹಾಲೆಮಜಲು ಸಭಾಧ್ಯಕ್ಷತೆ ವಹಿಸಿದ್ದರು. ಜೇಸಿ ಸಂಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ ಉಪಸ್ಥಿತರಿದ್ದರು. ಜೇಸಿ ಕೌಶಿಕ್ ಕುಳ ವಂದನಾರ್ಪಣೆಗೈದರು.