ಶನಿವಾರಸಂತೆ, ಸೆ. ೧೮: ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಓಝೋನ್ ಅರಿವು ಕಾರ್ಯಾಗಾರದ ಮೂಲಕ ವಿಶ್ವ ಓಝೋನ್ ದಿನಾಚರಣೆಯನ್ನು ಆಚರಿಸಲಾಯಿತು.

ಓಝೋನ್ ಸಂರಕ್ಷಣೆ ಮತ್ತು ಪರಿಸರದಲ್ಲಿ ಆಗುತ್ತಿರುವ ಹಾನಿಕಾರಕ ಬದಲಾವಣೆಗಳಿಂದ ಓಝೋನ್ ಹೇಗೆ ಹಾನಿ ಗೊಳಗಾಗುತ್ತಿದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಶಾಲಾ ಪ್ರಯೋಗಾಲಯದಲ್ಲಿ ಕೃತಕ ಓಝೋನ್ ವಲಯವನ್ನು ಸೃಷ್ಟಿಸಿ ಅರಿವು ಮೂಡಿಸಿದರು. ಅತಿಥಿ ಶಿಕ್ಷಕಿ ಎಂ.ಆರ್. ನವ್ಯಾ ಭೂಮಿ ಮತ್ತು ಓಝೋನ್ ವಲಯದ ಮಾದರಿ ಜೊತೆ ವಿದ್ಯಾರ್ಥಿಗಳಿಗೆ ಓಝೋನ್ ಯಾವ ರೀತಿಯಲ್ಲಿ ಹಾನಿಗೊಳಗಾಗುತ್ತಿದೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ವಿದ್ಯಾರ್ಥಿಗಳು ಕುತೂಹಲ, ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.