ಗೋಣಿಕೊಪ್ಪಲು, ಸೆ. ೧೮: ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು ಇವುಗಳ ಕಾಟದಿಂದ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯಲ್ಲಿ ವಿಪರೀತ ಉಪಟಳ ನೀಡುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಪೊನ್ನಂಪೇಟೆ ಹೋಬಳಿಯ ತಿತಿಮತಿ ಪಂಚಾಯಿತಿ ವ್ಯಾಪ್ತಿಯ ಸಮೀಪ ವಿರುವ ದೇವಮಚ್ಚಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿವೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊAಡಿರುವ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಗೋಳ, ದೇವಮಚ್ಚಿ, ಅಕ್ಕೆಮಾಳ, ಕಾರೆಹಡ್ಲು ಗೋಸದನ ಈ ಭಾಗಗಳಲ್ಲಿ ಕಾಡಾನೆಗಳು ನಿರಂತರವಾಗಿ ಅರಣ್ಯ ಪ್ರದೇಶದಿಂದ ಗ್ರಾಮಗಳತ್ತ ನುಗ್ಗಿ ಬರುತ್ತಿವೆ. ಅರಣ್ಯ ಇಲಾಖೆಯು ಹಲವು ವರ್ಷಗಳ ಹಿಂದೆ ಕಾಡಾನೆಗಳು ಗ್ರಾಮಗಳತ್ತ ಆಗಮಿಸದೆ ಇರಲು ಕಂದಕಗಳನ್ನು ನಿರ್ಮಾಣ ಮಾಡಿತ್ತು.
ಅಲ್ಲದೆ ಸೋಲಾರ್ ಬೇಲಿಗಳನ್ನು ಅರಣ್ಯ ಅಂಚಿನಲ್ಲಿ ಅಳವಡಿಸಲಾಗಿತ್ತು. ಇದೀಗ ಕಂದಕಗಳ ನಿರ್ವಹಣೆ ಹಾಗೂ ಸೋಲಾರ್ ತಂತಿಗಳ ನಿರ್ವಹಣೆ ಇಲ್ಲದೆ ಕಾಡಾನೆಗಳು ಸಲೀಸಾಗಿ ಜನನಿಭಿಡ ಪ್ರದೇಶಕ್ಕೆ ಆಗಮಿಸುತ್ತಿವೆ.
ಈ ಭಾಗದಲ್ಲಿ ಬಹುತೇಕ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಜಾತಿಯ ಕುಟುಂಬಗಳು ಎರಡು, ಮೂರು ಎಕರೆ ಸ್ಥಳದಲ್ಲಿ ಕಾಫಿ, ಮೆಣಸು, ಅಡಿಕೆ ಹಾಗೂ ಬಾಳೆ ಬೆಳೆಗಳನ್ನು ಬೆಳೆಸಿದ್ದಾರೆ. ಇದೀಗ ತಡರಾತ್ರಿಯಲ್ಲಿ ಕಾಡಾನೆ ಹಿಂಡು ಹಲವೆಡೆ ದಾಳಿ ನಡೆಸಿದರೆ ಇಲ್ಲಿರುವ ಒಂಟಿ ಸಲಗವು ಬಾಳೆ ತೋಟಗಳನ್ನು ಗುರಿಯಾಗಿಟ್ಟುಕೊಂಡು ಗಿಡಗಳನ್ನು ಸಂಪೂರ್ಣ ಧ್ವಂಸಗೊಳಿಸುತ್ತಿದೆ. ಇದರಿಂದ ರೈತನ ಬದುಕು ಅತಂತ್ರವಾಗಿದೆ. ಅರಣ್ಯ ಇಲಾಖೆಯು ನೀಡುವ ಪರಿಹಾರ ಕೂಡ ಇವರ ಕೈ ಸೇರುತ್ತಿಲ್ಲ.
ಬೆಳೆಯನ್ನು ಕಳೆದುಕೊಂಡು ರೈತ ಕಷ್ಟ ಎದುರಿಸುತ್ತಿದ್ದಾನೆ. ಕಾಡಾನೆಗಳ ಭಯದಿಂದ ಈ ಭಾಗದ ರೈತರಿಗೆ ತೋಟಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.
ಅಲ್ಲದೆ ತೋಟದಲ್ಲಿ ಬೆಳೆಯಲಾಗುತ್ತಿರುವ ಕಾಫಿ, ಮೆಣಸು, ತೆಂಗು, ಅಡಿಕೆ, ಬಾಳೆ, ಇತ್ಯಾದಿ ಬೆಳೆಗಳು ಕಾಡಾನೆಗಳ ಹಾವಳಿಗೆ ನಿರಂತರವಾಗಿ ತುತ್ತಾಗುತ್ತಿವೆ.
ಈ ಭಾಗದಲ್ಲಿ ರೈತರು ವರ್ಷಂಪ್ರತಿ ಭತ್ತದ ಭೂಮಿಯನ್ನು ಹದಗೊಳಿಸಿ ಭತ್ತ ನಾಟಿ ಮಾಡುತ್ತಿದ್ದರು. ಆದರೆ ಭತ್ತ ಫಸಲು ಬರುವ ಸಮಯದಲ್ಲಿ ಕಾಡಾನೆಗಳು ದಾಳಿ ಇಡುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಫಸಲುಗಳು ಆನೆಯ ಪಾಲಾಗುತ್ತಿದ್ದವು. ಹೀಗಾಗಿ ಈ ಭಾಗದ ನೂರಾರು ಏಕರೆ ಭತ್ತದ ಗದ್ದೆಗಳು ಇದೀಗ ಪಾಳು ಬಿದ್ದಿವೆ. ಯಾವುದೇ ರೈತರು ಭತ್ತವನ್ನು ಬೆಳೆಯುವ ಪ್ರಯತ್ನಕ್ಕೆ ಕೈ ಹಾಕುತ್ತಿಲ್ಲ.
- ಹೆಚ್.ಕೆ. ಜಗದೀಶ್