ಕಣಿವೆ, ಸೆ. ೧೮: ಕಾಡಂಚಿನ ಬಹುತೇಕ ಗ್ರಾಮಗಳ ಕೃಷಿಕರಿಗೆ ಮಳೆಗಾಲದ ಈ ದಿನಗಳಲ್ಲಿ ತಾವು ಬೆಳೆದಂತಹ ಬೆಳೆಗಳನ್ನು ಕಾಡಾನೆಗಳಿಂದ ಕಾವಲು ಕಾಯುವ ಕಾಯಕ.

ರಾತ್ರಿ ಹಗಲೆನ್ನದೇ ತಮ್ಮ ಜಮೀನುಗಳಲ್ಲಿ ಬೆಳೆದಂತಹ ಜೋಳ, ಭತ್ತ, ಅಡಿಕೆ, ಬಾಳೆ, ತೆಂಗು ಮೊದಲಾದ ಫಸಲು ಕಾಡಾನೆಗಳ ಪಾಲಾಗದಂತೆ ಎಚ್ಚರವಹಿಸಿ ಸಂರಕ್ಷಿಸುವ ಕಾಯಕದಲ್ಲಿ ನಿತ್ಯವೂ ನಿರತರಾಗಿರುತ್ತಾರೆ.

ಅಂದರೆ ತಮ್ಮ ತಮ್ಮ ಹೊಲ ಗದ್ದೆಗಳಲ್ಲಿ ಇರುವ ಮರಗಳ ರೆಂಬೆಗಳ ಮೇಲೆ ಗುಡಿಸಲುಗಳನ್ನು ನಿರ್ಮಿಸಿ ಅದರಲ್ಲೇ ಉಳಿದು ಕೊಂಡು ಕಾಡಾನೆಗಳಿಂದ ಬೆಳೆಗಳನ್ನು ಕಾಯುತ್ತಾರೆ. ಈಗ ಎಡಬಿಡದೇ ಸುರಿವ ಮಳೆಯ ನಡುವೆಯೂ, ಕೊರೆವ ಚಳಿಯನ್ನು ಲೆಕ್ಕಿಸದೇ ಮರಗಳ ರೆಂಬೆಗಳ ಮೇಲೆ ಕುಳಿತು ಕಾಡಿನತ್ತವೇ ಮುಖ ಮಾಡುತ್ತಾರೆ. ಅಷ್ಟೇ ಅಲ್ಲ ಮರಗಳ ರೆಂಬೆಗಳ ನಿರ್ಮಿಸಿದ ಗುಡಿಸಲು ಗಳಿಗೆ ಸುಯ್ ಎಂದು ಬೀಸುವ ಕುಳಿರ್ಗಾಳಿಯ ಸದ್ದಿನ ನಡುವೆಯೂ ಕಾಡಾನೆಗಳು ಕಾಡಂಚಿನಲ್ಲಿ ಗಿಡ - ಮರಗಳ ರೆಂಬೆ ಕೊಂಬೆಯನ್ನು ಸೊಂಡಿಲಲ್ಲಿ ಸೀಳುವ ಶಬ್ಧದ ಕಡೆಯೇ ತಮ್ಮ ಕಿವಿಯನ್ನು ಒಡ್ಡುತ್ತಾರೆ. ಕೆಲವು ಕೃಷಿಕರು ಕಾಡಾನೆಗಳ ವಾಸನೆಯನ್ನು ಗ್ರಹಿಸಿ ಯಾವ ಕಡೆ ಕಾಡಾನೆಗಳಿವೆ ಎಂದು ತಮ್ಮ ಮೂಗಿನ ಮೂಲಕ ವಾಸನೆಯ ಗ್ರಹಿಕೆಯಿಂದಲೇ ಪತ್ತೆ ಹಚ್ಚುತ್ತಾರೆ.

ಕಾಡಾನೆಗಳು ಬೆಳೆಗೆ ಧಾಳಿ ಇಡದಂತೆ ಈ ರೀತಿಯ ಹರಸಾಹಸ ಮಾಡುತ್ತಾರೆ.

ಆದರೆ, ಹಗಲಿಡಿ ಜಮೀನಿನಲ್ಲಿ ದುಡಿದು ಬಸವಳಿದ ಕೃಷಿಕರು ರಾತ್ರಿಯ ವೇಳೆ ನೆಮ್ಮದಿಯಲ್ಲಿ ಮಲಗುವಂತಿಲ್ಲ. ಏಕೆಂದರೆ, ಇವರೇನಾದರೂ ಕಾಡಾನೆಗಳ ಕಾವಲು ಕಾಯದೇ ಎಚ್ಚರ ತಪ್ಪಿ ನಿದ್ರೆಗೆ ಜಾರಿದಾಗಲೇ ಹಲವು ಬಾರಿ ಕಾಕತಾಳೀಯ ಎಂಬAತೆ ಗುಂಪಾನೆಗಳು ಒಮ್ಮೆಲೆ ಜಮೀನಿಗೆ ನುಗ್ಗಿ ಜೋಳದ ಫಸಲು ತಿಂದು ತುಳಿದು ನಾಶಗೈದು ತೆರಳುತ್ತವೆ ಎನ್ನುತ್ತಾರೆ ಏಲಕ್ಕನೂರು ಕೃಷಿಕ ಬಸವರಾಜು.

ಹೊಲದಲ್ಲಿ ದೀಪಾವಳಿ

ಕಷ್ಟಪಟ್ಟು ಗಳಿಸಿದ ಹಣವನ್ನು ವ್ಯಯಿಸಿ ಅಂಗಡಿಗಳಲ್ಲಿ ಪಟಾಕಿ ಖರೀದಿಸುವ ಇಲ್ಲಿನ ಕೃಷಿಕರು, ರಾತ್ರಿ ವೇಳೆ ಕಾಡಾನೆಗಳ ಸದ್ದು ಕಂಡೊಡನೆ ಮರದ ಮೇಲಿನ ಗುಡಿಸಲ ಮೇಲೆಯೇ ಕುಳಿತು ಕೂಗಾಡಿ, ಛೀರಾಡಿ, ಪಟಾಕಿಯನ್ನು ಹಚ್ಚಿ ಎಸೆದು ಸದ್ದು ಮಾಡುತ್ತಾರೆ.

ಆದಾಗ್ಯೂ ಕೆಲವು ಪುಂಡಾನೆ ಗಳು ಹಾಗೂ ಮೊಂಡಾನೆಗಳು ಯಾವ ಶಬ್ಧಕ್ಕೂ ಅಂಜದೇ ಅಳುಕದೇ ಒಂದೇ ಸಮನೆ ಧಾಳಿ ಇಟ್ಟು ಬೆಳೆ ನಾಶ ಮಾಡಿ ಕಾಲು ಕೀಳುತ್ತವೆ.

ನಷ್ಟದ ಮೇಲೆ ನಷ್ಟ - ಸಂಕಷ್ಟ

ಕೃಷಿಕರು ನಾವು ಸಾಲ ಸೋಲ ಮಾಡಿ ಹಣ ತಂದು ಜೋಳದ ಬೆಳೆ ಬೆಳೆಯುತ್ತೇವೆ. ಇನ್ನೇನು ಫಸಲು ಕೈಗೆ ಬರಬೇಕು ಎನ್ನುವಷ್ಟರಲ್ಲಿ ಕಾಡಾನೆಗಳು ಒಮ್ಮೆಗೆ ಲೂಟಿಗೈಯುತ್ತಿವೆ. ಇದರಿಂದಾಗಿ ನಮಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಈ ನಷ್ಟವನ್ನು ಸರ್ಕಾರ ನಮಗೆ ಭರಿಸದೇ ಇರುವುದರಿಂದ ನಾವು ಯಾವಾಗಲೂ ಸಂಕಷ್ಟ ದಿಂದಲೇ ಜೀವನ ನಡೆಸುವಂತಾಗಿದೆ ಎನ್ನುತ್ತಾರೆ ರೈತ ಮಹಿಳೆ ಏಲಕ್ಕನೂರು ಗೌರಮ್ಮ.

ಆನೆಗಳಿಗೆ ಕಾಡಿನಲ್ಲಿ ಆಹಾರವಿಲ್ಲ

ಕಾಡಾನೆಗಳು ಹಸಿವು ನೀಗಿಸಿ ಕೊಳ್ಳಲು ಕಾಡಿನೊಳಗೆ ಯಾವುದೇ ಆಹಾರದ ಗಿಡಗಂಟಿಗಳು, ಮರದ ತೊಗಟೆಗಳು ಇಲ್ಲದ ಕಾರಣ ಹಸಿವು ತಾಳಲಾರದೇ ಹಗಲಿಡೀ ಕಾದು ಕಾದು ಬಳಲಿ ರಾತ್ರಿಯಾಗುತ್ತಲೇ ರೈತರ ಹೊಲ ಗದ್ದೆಗಳಲ್ಲಿ ಬೆಳೆದು ನಿಂತ ಫಸಲು ತಿನ್ನಲು ಧಾವಿಸುತ್ತಿವೆ. ಕಾಡಿನ ಸುತ್ತಲೂ ಕಾಡಾನೆಗಳ ನಿಗ್ರಹಕ್ಕೆಂದು ಅರಣ್ಯ ಇಲಾಖೆ ಮಾಡುವ ಯೋಚನೆ ಹಾಗೂ ಯೋಜನೆಗಳು ವ್ಯರ್ಥವಾಗುತ್ತಿರುವ ಕಾರಣ ಕೃಷಿಕರ ಸಂಕಷ್ಟಕ್ಕೆ ಸೂಕ್ತ ರೀತಿಯ ಪರಿಹಾರ ಕನಸಿನ ಮಾತಾಗುತ್ತಿದೆ.

ಇಲಾಖೆ ನೇರವಾಗಿ ರೈತರಿಗೆ ಹಣ ವಿತರಿಸಲಿ

ಕಾಡಾನೆಗಳ ಹಾವಳಿ ತಡೆಗಟ್ಟುವ ಹೆಸರಿನಲ್ಲಿ ಅರಣ್ಯ ಇಲಾಖೆ ಲಕ್ಷಾಂತರ ರೂಗಳ ವೆಚ್ಚದಲ್ಲಿ ನಿರ್ಮಿಸುವ ಸೋಲಾರ್ ಬೇಲಿ, ಆನೆ ಕಂದಕಗಳAತಹ ಕಾಮಗಾರಿಗಳ ಬದಲು ಆ ಹಣವನ್ನು ಕಾಡಂಚಿನ ನಮ್ಮ ರೈತರಿಗೆ ಸಮನಾಗಿ ಹಂಚಿದರೆ ನಾವುಗಳೇ ನಮ್ಮ ನಮ್ಮ ಜಮೀನಿನ ಸುತ್ತಾ ಅಚ್ಚುಕಟ್ಟಾದ ಸೋಲಾರ್ ಬೇಲಿ ಅಳವಡಿಸಿಕೊಳ್ಳುತ್ತೇವೆ ಎಂದು ಕಾಡಂಚಿನ ಕೃಷಿಕರಾದ ಮೋಹನ್, ರಘು, ರಾಜಣ್ಣ, ನಾಗರತ್ನ, ಪ್ರೇಮಲೀಲಾ ಮೊದಲಾದವರು ಹೇಳುತ್ತಾರೆ.

ಒಟ್ಟಾರೆ, ಇದು ಕಾಡಂಚಿನ ಗ್ರಾಮ ಕೇವಲ ಏಲಕ್ಕನೂರು ಗ್ರಾಮವೊಂದರ ವ್ಯಥೆ ಅಥವಾ ಕಥೆಯಲ್ಲ. ಇಡೀ ಕೊಡಗು ಜಿಲ್ಲೆಯ ಅರಣ್ಯ ದಂಚಿನ ಹತ್ತಾರು ಗ್ರಾಮಗಳ ನೂರಾರು ಕೃಷಿಕರು ಅನುಭವಿ ಸುತ್ತಿರುವ ನರಕ ಯಾತನೆಯಾಗಿದೆ. ಇದಕ್ಕೆ ಸೂಕ್ತ ಪರಿಹಾರ ದೊರಕಿಸಿ ರೈತರ ಸಂಕಷ್ಟಗಳಿಗೆ ನೆರವಾಗುವ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಹಾಗೂ ಬದ್ಧತೆ ಮತ್ತು ಕಾಳಜಿ ತೋರುವ ಜನಪ್ರತಿನಿಧಿಗಳ ಅನಿವಾರ್ಯತೆ ಇಂದು ಅತೀ ಅಗತ್ಯವಿದೆ.

- ಕೆ.ಎಸ್. ಮೂರ್ತಿ