ಸೋಮವಾರಪೇಟೆ, ಸೆ. ೧೬: ರಕ್ತದಾನ ಶ್ರೇಷ್ಠ ದಾನವಾಗಿದ್ದು, ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ೬೫ ವರ್ಷದವರೆಗೆ ರಕ್ತದಾನ ಮಾಡಿದರೆ, ರೋಗ ಮುಕ್ತರಾಗಿ ನೆಮ್ಮದಿಯ ಬದುಕು ಸಾಗಿಸಬಹುದು ಎಂದು ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಅಭಿಪ್ರಾಯಿಸಿದರು.
ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಚೌಡ್ಲು ಗ್ರಾಮ ಪಂಚಾಯಿತಿ ವತಿಯಿಂದ ಚೌಡ್ಲು ಸಹಕಾರ ಸಂಘದ ಸಮುದಾಯಭವನದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದಿಂದ ಶರೀರದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಶರೀರದಲ್ಲಿ ೫ ರಿಂದ ೬ ಲೀಟರ್ನಷ್ಟು ರಕ್ತ ಇರುತ್ತದೆ. ಶರೀರದಿಂದ ಕೇವಲ ೩೫೦ ಮಿ.ಲೀ. ರಕ್ತವನ್ನು ಸಂಗ್ರಹಿಸ ಲಾಗುತ್ತದೆ. ರಕ್ತದಾನದಿಂದ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು. ಮಡಿಕೇರಿ ರಕ್ತನಿಧಿ ಕೇಂದ್ರದಲ್ಲಿ ತಿಂಗಳಿಗೆ ೩೦೦ ಯೂನಿಟ್ ರಕ್ತದ ಅವಶ್ಯಕತೆಯಿದ್ದು, ಆರೋಗ್ಯವಂತರು ಸ್ವಯಂಪೇರಿತ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವವನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷರಾದ ಮಂಜುಳಾ ಸುಬ್ರಮಣಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್, ಪಿಡಿಒ ಪೂರ್ಣ ಕುಮಾರ್, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೆಂದ್ರದ ಆಡಳಿತ ವೈದ್ಯಾಧಿಕಾರಿ ಇಂದೂಧರ್, ಆರೋಗ್ಯ ನಿರೀಕ್ಷಕ ಅಧಿಕಾರಿ ಮಹೇಶ್, ಸಮುದಾಯ ಆರೋಗ್ಯ ಅಧಿಕಾರಿ ಭೂಮಿಕ, ಧರಣೇಶ್, ರಾಜ್ ಇದ್ದರು. ಶಿಬಿರದಲ್ಲಿ ಮೂವತ್ತು ಮಂದಿ ರಕ್ತದಾನ ಮಾಡಿದರು.