ಶೃಂಗಸಭೆ : ಭಾರತದ ಅಧ್ಯಕ್ಷತೆಗೆ ಚೀನಾ ಬೆಂಬಲ

ಉಜ್ಬೇಕಿಸ್ತಾನ್, ಸೆ. ೧೬: ಮುಂದಿನ ವರ್ಷದ ಶಾಂಘೈ ಸಹಕಾರ ಒಕ್ಕೂಟ(ಎಸ್‌ಸಿಒ)ದ ಅಧ್ಯಕ್ಷರಾಗಲು ಭಾರತವನ್ನು ಬೆಂಬಲಿಸುತ್ತೇವೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. ಉಜ್ಬೇಕಿಸ್ತಾನ್‌ನಲ್ಲಿ ನಡೆದ ಶಾಂಘೈ ಶೃಂಗಸಭೆಯ ವಿಸ್ತೃತ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನಂತರ ಮಾತನಾಡಿದ ಜಿನ್‌ಪಿಂಗ್, ಮುಂದಿನ ವರ್ಷ ನಡೆಯಲಿರುವ ಎಸ್‌ಸಿಒ ಶೃಂಗಸಭೆಯ ಭಾರತದ ಅಧ್ಯಕ್ಷತೆಗೆ ಚೀನಾದ ಬೆಂಬಲವಿದೆ ಎಂದು ಹೇಳಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಿಎಂ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲು ಸಿದ್ಧರಾಗಿದ್ದು ಈ ವೇಳೆ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಭಾರತಕ್ಕೆ ಅಭಿನಂದನಾ ಸಂದೇಶವನ್ನು ಸಹ ರವಾನಿಸಲಿದ್ದಾರೆ. ಇಂದು ೨೨ನೇ ಎಸ್‌ಸಿಒ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಕೋವಿಡ್-೧೯ ಸಾಂಕ್ರಾಮಿಕದ ನಂತರ ಜಗತ್ತು ಆರ್ಥಿಕ ಚೇತರಿಕೆಯ ಸವಾಲುಗಳನ್ನು ಎದುರಿಸುತ್ತಿವೆ. ಇದರ ನಡುವೆ ಎಸ್‌ಸಿಒ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು. ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ, ಜಾಗತಿಕ ಜಿಡಿಪಿಯ ಶೇ. ೩೦ರಷ್ಟು ಕೊಡುಗೆಯನ್ನು ಎಸ್‌ಸಿಒ ದೇಶಗಳು ನೀಡುತ್ತಿದ್ದು, ವಿಶ್ವದ ಜನಸಂಖ್ಯೆಯ ಶೇ. ೪೦ ಪ್ರತಿಶತವನ್ನು ಎಸ್‌ಸಿಒ ದೇಶಗಳು ಹೊಂದಿವೆ ಎಂದರು. ಉಕ್ರೇನ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಮತ್ತು ಜಾಗತಿಕ ಸಾಂಕ್ರಾಮಿಕವು ಜಾಗತಿಕ ಪೂರೈಕೆ ಸರಪಳಿಯಲ್ಲಿ ಅಡೆತಡೆಗಳಿಗೆ ಕಾರಣವಾಗಿದ್ದು, ಜಗತ್ತು ತೀವ್ರ ಶಕ್ತಿ ಮತ್ತು ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಮೋದಿ ಹೇಳಿದರು. ಎಸ್‌ಸಿಒ ಈ ಭಾಗಗಳಲ್ಲಿ ‘ವಿಶ್ವಾಸಾರ್ಹ, ಸ್ಥಿತಿಸ್ಥಾಪಕ ಮತ್ತು ವೈವಿಧ್ಯಮಯ' ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ೨೯ ವಿದ್ಯಾರ್ಥಿಗಳು ಅಸ್ವಸ್ಥ

ಮಂಡ್ಯ, ಸೆ. ೧೬: ಶಾಲೆಯಲ್ಲಿ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ೨೯ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ೧೯ ವಿದ್ಯಾರ್ಥಿನಿಯರು, ೧೦ ವಿದ್ಯಾರ್ಥಿಗಳಿಗೆ ವಾಂತಿ ಭೇದಿಯಿಂದ ಮಕ್ಕಳು ಅಸ್ವಸ್ಥಗೊಂಡಿದ್ದರು. ಅಸ್ವಸ್ಥ ೨೯ ವಿದ್ಯಾರ್ಥಿಗಳನ್ನ ಮಿಮ್ಸ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೆ.ಎಂ. ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮನೆ ಮೇಲೆ ಎಸಿಬಿ ದಾಳಿ

ನವದೆಹಲಿ, ಸೆ. ೧೬: ದೆಹಲಿ ವಕ್ಫ್ ಬೋರ್ಡ್ಗೆ ಸಂಬAಧಿಸಿದ ಎರಡು ವರ್ಷಗಳ ಹಿಂದಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ದೆಹಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಶುಕ್ರವಾರ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ಮನೆ ಮತ್ತು ಅವರಿಗೆ ಸಂಬAಧಿಸಿದ ಇತರ ಐದು ಸ್ಥಳಗಳ ಮೇಲೆ ದಾಳಿ ನಡೆಸಿದೆ. ೨೦೨೦ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಇಂದು ಬೆಳಿಗ್ಗೆ ಓಖ್ಲಾ ಶಾಸಕ ಅಮಾನತುಲ್ಲಾ ಖಾನ್‌ರನ್ನು ವಿಚಾರಣೆಗೆ ಕರೆಯ ಲಾಗಿತ್ತು. ವಿಚಾರಣೆ ಬೆನ್ನಲ್ಲೇ ಖಾನ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ದಾಳಿ ವೇಳೆ ರೂ. ೧೨ ಲಕ್ಷ ನಗದು ಮತ್ತು ಪರವಾನಗಿ ಇಲ್ಲದ ಗನ್, ಕೆಲವು ಕಾಟ್ರಿಡ್ಜ್ಗಳನ್ನು ಜಪ್ತಿ ಮಾಡಲಾಗಿದೆ. ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷರಾದ ಅಮಾನತುಲ್ಲಾ ಖಾನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ತಾವು ಹೊಸ ವಕ್ಫ್ ಬೋರ್ಡ್ ಕಚೇರಿಯನ್ನು ನಿರ್ಮಿಸಿದ್ದರಿಂದ ತಮ್ಮನ್ನು ವಿಚಾರಣೆ ಕರೆಯಲಾಗಿದೆ ಹೇಳಿಕೊಂಡಿದ್ದಾರೆ. ಅಮಾನತುಲ್ಲಾ ಖಾನ್ ಅವರ ಮನೆ ಮತ್ತು ಅವರ ಇತರ ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಫಾಯಿ ಕರ್ಮಚಾರಿಗಳಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ

ಬೆಂಗಳೂರು, ಸೆ. ೧೬: ದ್ವಿಚಕ್ರ ವಾಹನಗಳ ಯೋಜನೆ ಹತ್ತು ಮಹಾನಗರ ಪಾಲಿಕೆಗಳಿಗೆ ವಿಸ್ತರಣೆ ಆಗಿದ್ದು, ಮೊದಲ ಹಂತದಲ್ಲಿ ೪೦೦ ಜನರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧದ ಮೆಟ್ಟಿಲುಗಳ ಬಳಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು. ಸಫಾಯಿ ಕರ್ಮಚಾರಿಗಳಿಗೂ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿ ಅವರ ಬದುಕಿಗೆ ಶಕ್ತಿಯನ್ನು ತುಂಬುವ, ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಬದುಕನ್ನು ನಿರಾಳ ಮಾಡುವ ಅವಶ್ಯಕತೆ ಇದೆ. ಅವರು ಮಾಡುತ್ತಿರುವ ಕೆಲಸ ಅತ್ಯಂತ ಪ್ರಮುಖ ಕೆಲಸ. ನಾವು ಸೃಷ್ಟಿ ಮಾಡುವ ಕಸವನ್ನು ಪ್ರತಿನಿತ್ಯ ನಿರಂತರವಾಗಿ ದಣಿವಿಲ್ಲದೆ ಮಾಡುತ್ತಿದ್ದಾರೆ. ಆ ಕಾಯಕವನ್ನು ಗುರುತಿಸಿ ಪುರಸ್ಕರಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಈ ಉತ್ತಮ ಕೆಲಸ ಮಾಡಿದ ನಿಗಮದ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ವಿದೇಶದಲ್ಲಿ ಕರ್ಮಚಾರಿಗಳು ಕಾರುಗಳಲ್ಲಿ ಓಡಾಡುವುದನ್ನು ಕೇಳಿದ್ದೆವು. ಈಗ ಇದು ನಮ್ಮ ದೇಶದಲ್ಲಿಯೂ ಆಗುತ್ತಿದೆ. ಈಗ ಸ್ಕೂಟರ್‌ನಲ್ಲಿ ಓಡಾಡುವಂತಾಗಿದ್ದು, ಬರುವ ದಿನಗಳಲ್ಲಿ ಅವರಿಗೆ ಕಾರುಗಳನ್ನು ಒದಗಿಸುವಂತಾಗುವ ವಿಶ್ವಾಸವಿದೆ ಎಂದರು. ಅವರ ಎಲ್ಲಾ ವಿಚಾರಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. ವಾಹನಗಳಿಗೆ ಇದಕ್ಕೆ ಬಾಕ್ಸ್ ಜೋಡಿಸಲು ಸೂಚಿಸಿದ್ದು, ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಪ್ರತಿ ಕ್ಷೇತ್ರಕ್ಕೆ ಬಾಕ್ಸ್ ಉಳ್ಳ ೧೦೦ ಸ್ಕೂಟರ್‌ಗಳನ್ನು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಒದಗಿಸಲು ತೀರ್ಮಾನಿಸಿ ಆದೇಶಿಸಲಾಗಿದೆ. ಸುಮಾರು ೨೫ ಸಾವಿರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನುಕೂಲವಾಗುತ್ತದೆ. ಸರ್ಕಾರ ಹಂತ ಹಂತವಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕಾರ್ಯಕ್ರಮ ರೂಪಿಸ ಲಾಗುತ್ತಿದೆ. ಯುವಕರಿಗೆ, ಎಸ್.ಸಿ/ ಎಸ್.ಟಿ ಜನಾಂಗದವರಿಗೆ ಮಹಿಳೆಯರಿಗೆ ಒದಗಿಸಲಾಗುತ್ತಿದೆ. ಇದೊಂದು ಬಡವರ, ದುಡಿಯುವ ವರ್ಗದ ಪರವಾದ ಸರ್ಕಾರ. ಸಾಮಾಜಿಕ ನ್ಯಾಯ ಅನ್ನುವುದು ಕೇವಲ ಮಾತಿನಲ್ಲಿ ಅಲ್ಲದೆ ಕೃತಿಯಲ್ಲಿ ಮಾಡಿ ತೋರಿಸುತ್ತಿರುವ ಸರ್ಕಾರ ಎಂದು ಮುಖ್ಯಮಂತ್ರಿಗಳು ಹೇಳಿದರು. ಸಚಿವ ಗೋವಿಂದ ಕಾರಜೋಳ, ಜೊತ ಶ್ರೀನಿವಾಸ ಪೂಜಾರಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ, ಸಫಾಯಿ ಕರ್ಮಚಾರಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್, ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.

ರಾಣಿ ೨ನೇ ಎಲಿಜಬೆತ್‌ಗೆ ಅಂತಿಮ ನಮನಕ್ಕೆ ಚೀನಾಗೆ ವಿರೋಧ

ಲಂಡನ್, ಸೆ. ೧೬: ತಾ. ೧೯ ರಂದು ಲಂಡನ್‌ನ ವೆಸ್ಟ್ಮಿನ್‌ಸ್ಟರ್ ಅಬೆಯಲ್ಲಿ ನಡೆಯುವ ಅಂತ್ಯಕ್ರಿಯೆಗೂ ಮೊದಲು ಸಂಸತ್ತಿನ ಸಂಕೀರ್ಣದೊಳಗಿನ ವೆಸ್ಟ್ಮಿನಿಸ್ಟರ್ ಹಾಲ್‌ನಲ್ಲಿ ನಡೆಯುವ ರಾಣಿ ಎಲಿಜಬೆತ್ ಅವರ ಅಂತಿಮ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲು ಚೀನಾದ ಉನ್ನತ ಮಟ್ಟದ ನಿಯೋಗಕ್ಕೆ ಬ್ರಿಟನ್ ಅನುಮತಿ ನಿರಾಕರಿಸಿದೆ ಎಂದು ಶುಕ್ರವಾರ ಯುಕೆ ಮಾಧ್ಯಮಗಳು ವರದಿ ಮಾಡಿವೆ. ಹೌಸ್ ಆಫ್ ಕಾಮನ್ಸ್ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಅವರು, ಚೀನಾ ನಿಯೋಗದ ವೆಸ್ಟ್ಮಿನಿಸ್ಟರ್ ಹಾಲ್‌ಗೆ ಪ್ರವೇಶಿಸುವ ವಿನಂತಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಸಿನ್‌ಜಿಯಾಂಗ್‌ನಲ್ಲಿರುವ ಉಯಿಘರ್ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದ ಬ್ರಿಟನ್‌ನ ಐವರು ಸಂಸದರ ಮೇಲೆ ಚೀನಾ ನಿರ್ಬಂಧ ವಿಧಿಸಿತ್ತು. ಇದೇ ಕಾರಣಕ್ಕಾಗಿ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಅವರು ಚೀನಾದ ನಿಯೋಗಕ್ಕೆ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಭದ್ರತೆಗೆ ಸಂಬAಧಿಸಿದ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿರುವ ಹೌಸ್ ಆಫ್ ಕಾಮನ್ಸ್, ಚೀನಾವು ರಾಣಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದೆ. ಆದರೆ ಸಂಸತ್ತಿನ ಕಟ್ಟಡಕ್ಕೆ ಅನುಮತಿಸುವುದಿಲ್ಲ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ವೆಸ್ಟ್ಮಿನಿಸ್ಟರ್ ಹಾಲ್ ಪಾರ್ಲಿಮೆಂಟರಿ ಎಸ್ಟೇಟ್‌ನ ಭಾಗವಾಗಿರುವುದರಿಂದ, ಇದು ಕಾಮನ್ಸ್ ಮತ್ತು ಲಾರ್ಡ್ಸ್ ಸ್ಪೀಕರ್‌ಗಳ ನಿಯಂತ್ರಣದಲ್ಲಿದೆ. ಈ ಕ್ರಮವು ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಒತ್ತಡಕ್ಕೆ ಒಳಗಾಗಿರುವ ಬ್ರಿಟನ್-ಚೀನಾ ಸಂಬAಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆಯಿದೆ. ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ, ಅವರ ಬದಲಿಗೆ ಚೀನಾದ ನಿಯೋಗದೊಂದಿಗೆ ಉಪಾಧ್ಯಕ್ಷ ವಾಂಗ್ ಕ್ವಿಶನ್ ಭಾಗವಹಿಸುವ ನಿರೀಕ್ಷೆ ಇದೆ.