*ಸಿದ್ದಾಪುರ ಸೆ. ೧೬: ಆಹಾರ ಮತ್ತು ನೀರು ಅರಸಿ ಬರುತ್ತಿರುವ ಕಾಡಾನೆಗಳು ಕಾಡು ಸೇರುತ್ತಿಲ್ಲ. ತೋಟಗಳಲ್ಲೇ ಬೀಡು ಬಿಡುತ್ತಿರುವ ವನ್ಯಜೀವಿಗಳಿಂದ ಬೆಳೆಗಾರರ ಸಂಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಜಿಲ್ಲೆಯ ಕೃಷಿಕ ವರ್ಗ ಕೃಷಿ ವೃತ್ತಿಯನ್ನೇ ಬಿಟ್ಟು ಭೂಮಿಯನ್ನು ಮಾರಾಟ ಮಾಡಿ ಉದ್ಯೋಗ ಅರಸಿ ಹೋಗುವ ಭೀತಿ ಎದುರಾಗಬಹುದು.

ಕೊಡಗು ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳÀಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಹಿಂಡು ಹಿಂಡಾಗಿ ಲಗ್ಗೆ ಇಡುತ್ತಿರುವ ಆನೆಗ ಳಿಂದಾಗಿ ಮಾನವ ಜೀವಭಯ ಸೃಷ್ಟಿ, ಮಾತ್ರವಲ್ಲ ಮುಂದಿನ ಬದುಕಿನ ಬಗ್ಗೆ ನಿರೀಕ್ಷೆಗಳು ಹುಸಿಯಾಗುವ ಸಾಧ್ಯತೆಗಳಿದೆ. ಅಭ್ಯತ್ ಮಂಗಲ ಭಾಗದಲ್ಲಿ ಹಿಂಡು ಹಿಂಡಾಗಿ ಕಾಡಾನೆಗಳು ಮುಖ್ಯ ರಸ್ತೆಯಲ್ಲೇ ಸಂಚರಿಸುತ್ತಿವೆ. ತೋಟಗಳಲ್ಲೇ ಮರಿ ಹಾಕಿ ಸಂಸಾರ ಮಾಡುತ್ತಿವೆ. ಹೊತ್ತು, ಗೊತ್ತಿಲ್ಲದೆ ಅಲೆದಾಡುತ್ತಿರುವ ದೈತ್ಯ ಮೃಗಗಳಿಗೆ ಅಂಜಿ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗುತ್ತಿಲ್ಲ, ವಿದ್ಯಾರ್ಥಿ ಗಳನ್ನು ಶಾಲೆಗೆ ಕಳುಹಿಸಲು ಪೋಷಕರು ಧೈರ್ಯ ತೋರುತ್ತಿಲ್ಲ. ಕೃಷಿಕ ವರ್ಗ ಕೃಷಿ ಭೂಮಿಯಲ್ಲಿ ತೊಡಗಿಸಿಕೊಳ್ಳಲು ಉತ್ಸಾಹ ತೋರುತ್ತಿಲ್ಲ. ಸಾವಿರಾರು ರೂಪಾಯಿ ಮಣ್ಣಿಗೆ ಹಾಕಿ ಬೆಳೆದ ಫಸಲು ಕಾಡಾನೆಗಳ ಹೊಟ್ಟೆ ಸೇರುವುದಾದರೆ ನಾವೇಕೆ ಬೆಳೆ ಬೆಳೆಯಬೇಕು ಎಂದು ಬೆಳೆಗಾರರು ಪ್ರಶ್ನಿಸುತ್ತಾರೆ.

ಕಾಡಿನಲ್ಲಿ ಸೂಕ್ತ ಆಹಾರ ಮತ್ತು ನೀರಿನ ವ್ಯವಸ್ಥೆ ಇದ್ದಿದ್ದರೆ ಆನೆಗಳ ನಾಡಿಗೆ ಬರುತ್ತಿರಲಿಲ್ಲ. ಆಹಾರದ ಕೊರತೆಯಿಂದಾಗಿಯೇ ನಾಡಿನೆಡೆಗೆ ಬರುತ್ತಿರುವ ಆನೆಗಳಿಂದಾಗಿ ತೋಟಗಳು ನಾಶವಾಗುತ್ತಿವೆ, ತೋಟದ ಕೆರೆಗಳು ಆನೆಗಳಿಗೆ ಮೀಸಲಾಗಿಬಿಟ್ಟಿವೆ. ಆಹಾರ ಮತ್ತು ನೀರು ಯಥೇಚ್ಚವಾಗಿ ದೊರೆಯು ತ್ತಿರುವುದರಿಂದಲೇ ಕಾಡಾನೆಗಳು ತೋಟಗಳನ್ನು ತೊರೆಯಲು ಒಪ್ಪುತ್ತಿಲ್ಲ. ಅಸಹಾಯಕ ಸ್ಥಿತಿಯಲ್ಲಿರುವ ಅರಣ್ಯ ಅಧಿಕಾರಿಗಳು ಗ್ರಾಮಸ್ಥರು ದೂರು ನೀಡಿದರೆ ಬಂದು ಪಟಾಕಿ ಸಿಡಿಸಿ ಹೋಗುತ್ತಾರೆ. ಅವರು ಹೋದ ತಕ್ಷಣ ಮತ್ತೆ ಅದೇ ಪ್ರದೇಶಕ್ಕೆ ಕಾಡಾನೆಗಳು ಮರಳುತ್ತವೆ. ಮಾನವ ಜೀನಹಾನಿಯಾದಾಗ ಪರಿಹಾರದ ಚೆಕ್ ನೀಡಿ ಪ್ರತಿಭಟನಾಕಾರರನ್ನು ಸುಮ್ಮನಾಗಿಸುತ್ತಾರೆ. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಕಾಟಾಚಾರದ ಸಭೆ ನಡೆಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಶ್ವತ ಪರಿಹಾರ ಅನುಷ್ಠಾನಗೊಳಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಸ್ಥಳೀಯ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟಾಕಿ ಶಬ್ಧ, ಕಾರ್ಯಾಚರಣೆ, ಕಂದಕ, ಸೋಲಾರ್ ಮತ್ತು ರೈಲ್ವೆ ಕಂಬಿಗಳ ಬೇಲಿ ಈ ಎಲ್ಲಾ ಪ್ರಯೋಗಗಳು ನಡೆದು ಹೋಗಿದೆ. ಇವುಗಳಿಗೆ ಸವಾಲೊಡ್ಡುತ್ತಿರುವ ಆನೆಗಳು ರಾಜಾರೋಷವಾಗಿ ಓಡಾಡುತ್ತಿವೆ. ಗ್ರಾಮ ಗ್ರಾಮಗಳಲ್ಲಿ ಹಸುಗಳಿಗಿಂತ ಕಾಡಾನೆಗಳ ಸಂಖ್ಯೆಯೇ ಹೆಚ್ಚು ಎನ್ನುವ ಸಂಶಯ ವ್ಯಕ್ತವಾಗುತ್ತಿದೆ.

ಅರಣ್ಯ ಇಲಾಖೆ ಹಳೆಯ ಪ್ರಯೋಗಗಳನ್ನು ಮಾಡುವುದನ್ನು ಬಿಟ್ಟು ಶಾಶ್ವತ ಪರಿಹಾರಕ್ಕಾಗಿ ದೊಡ್ಡದೊಂದು ಯೋಜನೆಯನ್ನು ರೂಪಿಸಬೇಕಾಗಿದೆ. ಇದೊಂದು ಗಂಭೀರ ಸಮಸ್ಯೆಯಾಗಿ ಮಾರ್ಪಡುತ್ತಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಇದರ ಬಗ್ಗೆ ಚಿಂತನೆ ನಡೆಸಿ ಕೃಷಿಕ ವರ್ಗದ ನೆರವಿಗೆ ಬರಬೇಕಿದೆ. ತಪ್ಪಿದಲ್ಲಿ ಮಲೆನಾಡ ಪ್ರದೇಶಗಳ ತೋಟಗಳು ಕಾಡಾನೆಗಳ ಪಾಲಾಗಿ ಬೆಳೆಗಾರ ಅನ್ನ ನೀಡುವ ಭೂಮಿಯನ್ನೇ ಮರೆಯ ಬೇಕಾಗುತ್ತದೆ. ಅತಿ ಹೆಚ್ಚು ಆರ್ಥಿಕ ಆದಾಯವನ್ನು ತಂದು ಕೊಡುತ್ತಿರುವ ಕಾಫಿ ತೋಟಗಳ ಉಳಿವಿಗೆ ಕಾಡಾನೆಗಳ ಉಪಟಳ ವನ್ನು ಶಾಶ್ವತವಾಗಿ ನಿಲ್ಲಿಸುವ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಳಿಗೆ ಜಿಲ್ಲೆಯಿಂದ ಜನಪ್ರತಿನಿಧಿಗಳು ಹಾಗೂ ಬೆಳೆಗಾರರ ನಿಯೋಗ ತೆರಳಿ ಕಾಡಾನೆಗಳ ಉಪಟಳದಿಂದ ಕೊಡಗನ್ನು ಮುಕ್ತಗೊಳಿಸುವಂತೆ ಒತ್ತಡ ಹೇರುವ ಅನಿವಾರ್ಯತೆ ಎದುರಾಗಿದೆ ಎಂದು ಹಿರಿಯ ಬೆಳೆಗಾರರು ಅಭಿಪ್ರಾಯ ಪಡುತ್ತಾರೆ. - ಅಂಚೆಮನೆ ಸುಧಿ