ಪೊನ್ನಂಪೇಟೆ, ಸೆ. ೧೭: ಗೋಣಿಕೊಪ್ಪಲು ಸಮೀಪದ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಕೊಡಗಿನ ಬ್ರಹ್ಮಗಿರಿ ಸಹೋದಯ ಕ್ಲಸ್ಟರಿಗೆ ಒಳಪಡುವ ಸಿಬಿಎಸ್ಸಿ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕರ ಸಂಕೇತ್ ಪೂವಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸಲು ರಸಪ್ರಶ್ನೆ ಕಾರ್ಯಕ್ರಮಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ.
ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆ ಪ್ರಥಮ ಸ್ಥಾನ, ಕೂಡಿಗೆ ಸೈನಿಕ ಶಾಲೆ ದ್ವಿತೀಯ ಸ್ಥಾನ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ತೃತೀಯ ಸ್ಥಾನ ಪಡೆದುಕೊಂಡಿತು. ವಿಜೇತರಿಗೆ ಪ್ರಮಾಣಪತ್ರದೊಂದಿಗೆ ಪಾರಿತೋಷಕವನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ನಾಪೋಕ್ಲು ಅಂಕುರ್ ಶಾಲೆ, ಕೂಡಿಗೆ ಸೈನಿಕ ಶಾಲೆ, ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ವೀರಾಜಪೇಟೆ ಎಸ್ಎಂಎಸ್ ಶಾಲೆ, ಮಡಿಕೇರಿಯ ಕ್ರೆಸೆಂಟ್ ಶಾಲೆ ಮತ್ತು ಅತ್ತೂರಿನ ನ್ಯಾಷನಲ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ವಿಜ್ ಮಾಸ್ಟರ್ ಆಗಿ ನ್ಯಾಷನಲ್ ಅಕಾಡೆಮಿ ಶಾಲೆಯ ಟ್ರಸ್ಟಿ ರಕ್ಷಿತ್ ಅಯ್ಯಪ್ಪ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನ್ಯಾಷನಲ್ ಅಕಾಡೆಮಿ ಶಾಲೆಯ ಮುಖ್ಯಸ್ಥೆ ಶಾಂತಿ ಅಚ್ಚಪ್ಪ, ಹಾಸ್ಯ ಅಯ್ಯಪ್ಪ, ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ೭ನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಪ್ರಾಂಶುಪಾಲೆ ಪುಷ್ಪ ಸ್ವಾಗತಿಸಿ, ಯುಜಿನ್ ಅತಿಥಿಗಳನ್ನು ಪರಿಚಯಿಸಿದರು. ಫೆಲ್ಸಿಟಾ ಸ್ಪರ್ಧಾ ತಂಡಗಳ ಪರಿಚಯ ಮಾಡಿದರು. ಕುಮುದ ವಂದಿಸಿದರೆ, ತಾರಾ, ದೇಚಕ್ಕ ನಿರೂಪಿಸಿದರು.