ಸೋಮವಾರಪೇಟೆ, ಸೆ. ೧೬ : ಕಳೆದ ಕೆಲ ವರ್ಷಗಳಿಂದ ನಿರ್ವಹಣೆಯ ಕೊರತೆ ಎದುರಿಸುತ್ತಿದ್ದ ಸೋಮವಾರಪೇಟೆ-ಬಾಣಾವರ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ೧೦ ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ ದೊರೆತಿದೆ.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಲೋಕೋಪಯೋಗಿ ಸಚಿವರಿಗೆ ಪತ್ರ ಬರೆದು ಈ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸುವಂತೆ ತಾ. ೨೮.೦೭.೨೦೨೨ರಂದು ಮನವಿ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದನೆ ನೀಡಿರುವ ಲೋಕೋಪಯೋಗಿ ಇಲಾಖಾ ಸಚಿವರು ಬಾಣಾವರ-ಸೋಮವಾರಪೇಟೆವರೆಗಿನ ೧೪ ಕಿ.ಮೀ. ರಸ್ತೆ ಅಭಿವೃದ್ಧಿಗೆ ರೂ. ೧೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದ್ದು, ರಸ್ತೆ ಹಾಗೂ ಸೇತುವೆ ಕಾಮಗಾರಿಗಳನ್ನು ಷರತ್ತಿಗೊಳಪಟ್ಟು ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಬೆಂಗಳೂರು ದಕ್ಷಿಣ ವಿಭಾಗದ ಸಂಪರ್ಕ ಮತ್ತು ಕಟ್ಟಡ ಇಲಾಖೆಯ ಮುಖ್ಯ ಇಂಜಿನಿಯರ್ಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿ ೮೫ಕ್ಕೆ ಒಳಪಟ್ಟಿರುವ ಈ ರಸ್ತೆಯು ಇದೀಗ ಹೊಂಡಾ ಗುಂಡಿಗಳ ಆಗರವಾಗಿದ್ದು, ಸಂಚಾರ ದುಸ್ತರವಾಗಿದೆ. ಇದರೊಂದಿಗೆ ಕೆಲವು ಕಡೆಗಳಲ್ಲಿ ರಸ್ತೆ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ತಿರುವು ರಸ್ತೆಗಳಲ್ಲಿ ಅಪಘಾತಗಳೂ ಸಂಭವಿಸುತ್ತಿವೆ. ಭಾರೀ ವಾಹನಗಳು ಸಂಚರಿಸುವುದರಿAದ ರಸ್ತೆಯು ಶಿಥಿಲಾವಸ್ಥೆಯಲ್ಲಿದೆ.
ಈ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಅನೇಕ ಸಮಯ ದಿಂದ ಬೇಡಿಕೆ ಮುಂದಿಡುತ್ತಿದ್ದರು. ಇದೀಗ ಶಾಸಕ ಅಪ್ಪಚ್ಚುರಂಜನ್ ಅವರ ಮನವಿಯ ಮೇರೆಗೆ ರೂ. ೧೦ ಕೋಟಿ ಅನುದಾನದಲ್ಲಿ ಅಪೆಂಡಿಕ್ಸ್-ಇ ಮೂಲಕ ಕಾಮಗಾರಿಯನ್ನು ನಿರ್ವಹಿಸಲು ನಿರ್ದೇಶಿಸಿದೆ.
ಅಂದಾಜು ಪಟ್ಟಿಗೆ ಆಡಳಿತಾತ್ಮಕ ಹಾಗೂ
(ಮೊದಲ ಪುಟದಿಂದ) ತಾಂತ್ರಿಕ ಅನುಮೋದನೆಯನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದುಕೊಳ್ಳುವುದು. ಕಾಮಗಾರಿಯನ್ನು ೨೦೨೨-೨೩ನೇ ಸಾಲಿನ ರಸ್ತೆ ಮತ್ತು ಸೇತುವೆ ಹೊಸ ಕಾಮಗಾರಿಗಳ ಅಪೆಂಡಿಕ್ಸ್-ಇ ಮೂಲಕ ಸೇರ್ಪಡೆ ಮಾಡಿಕೊಳ್ಳುವುದು. ಸಹಮತಿಸಲಾದ ಅನುದಾನದ ಮಿತಿಯಲ್ಲಿಯೇ ಕಾಮಗಾರಿಗಳ ಅಂದಾಜನ್ನು ಪ್ರಚಲಿತ ದರಪಟ್ಟಿಯನ್ವಯ ತಯಾರಿಸಿ, ಅನುದಾನದ ಮಿತಿಯಲ್ಲಿಯೇ ನಿರ್ವಹಿಸುವುದು. ಯಾವುದೇ ಕಾರಣಕ್ಕೂ ಅಂದಾಜಿನಲ್ಲಿ ನಿರ್ಣಾಯಕ ಐಟಂಗಳು ಕೈಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.
ಈಗಿರುವ ರಸ್ತೆಯು ಬಹುತೇಕ ಶಿಥಿಲಾವಸ್ಥೆಗೆ ತಲುಪಿದೆ. ರಸ್ತೆಯಲ್ಲಿ ಗುಂಡಿಗಳ ನಿರ್ಮಾಣದಿಂದ ಸಂಚಾರ ದುಸ್ತರವಾಗಿದೆ. ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿಗೆ ಈ ರಸ್ತೆ ಒಳಪಟ್ಟಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ. ಇದೇ ರಸ್ತೆಯ ಮುಂದುವರೆದ ಭಾಗವಾಗಿರುವ ಹಾಸನ ಜಿಲ್ಲೆ, ಕೊಣನೂರು ಹೋಬಳಿ ವ್ಯಾಪ್ತಿಗೆ ಒಳಪಡುವ ಬೆಟ್ಟಗಳಲೆ, ಮರಿಯಾನಗರ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆಯ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.
ಬಾಣಾವರದಿಂದ ಕೇವಲ ೧ ಕಿ.ಮೀ. ಅಂತರದಲ್ಲಿ ಮಾಗಡಿ-ಸೋಮವಾರಪೇಟೆ ರಾಜ್ಯ ಹೆದ್ದಾರಿ ೮೫ರಲ್ಲಿ ೧೬೬ ಕಿ.ಮೀ. ಉದ್ದದ ರಸ್ತೆಯನ್ನು ಎರಡು ಪಥದ ಸುಸಜ್ಜಿತ ರಸ್ತೆ ನಿರ್ಮಾಣ ಕಾಮಗಾರಿಯು ಕೆಶಿಪ್ ಯೋಜನೆಯ ಮೂಲಕ ಪ್ರಗತಿಯಲ್ಲಿದೆ.
ಸೋಮವಾರಪೇಟೆ-ಬಾಣಾವರ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಅನೇಕ ಬಾರಿ ಮನವಿ ಸಲ್ಲಿಸಿದ್ದರು. ರಸ್ತೆಯ ಗುಂಡಿಗಳಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ಮಾಡಿದ್ದರು. ಇದೀಗ ಬಾಣಾವರದಿಂದ ಸೋಮವಾರಪೇಟೆವರೆಗಿನ ೧೪ ಕಿ.ಮೀ. ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು, ಈ ರಸ್ತೆ ಸುಸಜ್ಜಿತಗೊಂಡಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.