ಮಡಿಕೇರಿ, ಸೆ. ೧೬: ಸೆಪ್ಟೆಂಬರ್ ತಿಂಗಳ ಅರ್ಧಭಾಗ ಮುಗಿದಿದ್ದರೂ ಕೊಡಗು ಜಿಲ್ಲೆಯಲ್ಲಿ ಇನ್ನೂ ಮಳೆಗಾಲದ ಚಿತ್ರಣ ದೂರಾದಂತಿಲ್ಲ. ಮುಂಗಾರು ಆರಂಭದ ಜೂನ್ ತಿಂಗಳಿನಿAದಲೇ ಜಿಲ್ಲೆ ಮಳೆಯ ಸನ್ನಿವೇಶವನ್ನು ಎದುರಿಸುತ್ತಿದೆ. ವಾಡಿಕೆಯಂತೆ ಜೂನ್ನಿಂದ ಮುಂಗಾರು ಮಳೆ ಆರಂಭಗೊAಡು ಈ ವೇಳೆಗೆ ಬಿಸಿಲಿನ ವಾತಾವರಣ ಎದುರಾಗಬೇಕಾಗಿತ್ತು. ಆದರೆ ಪ್ರಸಕ್ತ ವರ್ಷ ವಾತಾವರಣದಲ್ಲಿನ ಅಸಹಜತೆಯಿಂದಾಗಿ ಈಗಲೂ ಜಿಲ್ಲೆಯ ಜನರು ಮಳೆಗಾಲದ ಪರಿಸ್ಥಿತಿಯನ್ನೇ ಎದುರಿಸುವಂತಾಗಿದೆ.
ಈಗಾಗಲೇ ಜಿಲ್ಲೆಯಾದ್ಯಂತ ಕಳೆದ ವರ್ಷಕ್ಕಿಂತ ಮಳೆಯ ಪ್ರಮಾಣ ಹೆಚ್ಚಾಗಿದೆ. ಇದೀಗ ಮಳೆ ಮತ್ತೆಯೂ ಮುಂದುವರಿಯುತ್ತಿರುವುದು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ; ಮಾತ್ರವಲ್ಲ ಅಗತ್ಯ ಕೆಲಸ - ಕಾರ್ಯಗಳಿಗೂ ಅಡಚಣೆಯುಂಟಾಗುತ್ತಿದೆ. ಅದರಲ್ಲೂ ಈ ಬಾರಿಯ ಮಳೆಗಾಲ ವಿಭಿನ್ನವಾಗಿ ಕಂಡುಬರುತ್ತಿದೆ. ಯಾವ ಕ್ಷಣದಲ್ಲಿ ಭಾರೀ ಮಳೆ ಸುರಿಯಲಿದೆ ಎಂಬದನ್ನು ಊಹಿಸಲು ಆಗುತ್ತಿಲ್ಲ. ಒಂದಷ್ಟು ಬಿಸಿಲಿನ ದರ್ಶನವಾದರೆ, ಕೆಲವೆ ಕ್ಷಣಗಳಲ್ಲಿ ಮತ್ತೆ ದಿಢೀರನೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ದೋ... ಎಂದು ಮಳೆ ಸುರಿಯುವುದು ಸಾಮಾನ್ಯವಾಗಿದೆ.
ಪ್ರಸ್ತುತ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಉತ್ಸವ ಸಮೀಪಿಸುತ್ತಿದ್ದು, ಇದರ ಸಿದ್ಧತೆಗಳಿಗೂ ಈಗಿನ ವಾತಾವರಣ ಅಡಚಣೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ದಸರಾ ಉತ್ಸವ ಕಳೆಗುಂದಿತ್ತು. ಈ ಬಾರಿ ಒಂದಷ್ಟು ವಿಜೃಂಭಣೆಯ ಆಚರಣೆಗೆ ಪ್ರಯತ್ನಗಳು ಆರಂಭಗೊAಡಿವೆಯಾದರೂ ವಾತಾವರಣದ ಅಸಹಜತೆಯೇ ಆಯೋಜಕರ ಚಿಂತೆಗೆ ಕಾರಣವಾಗುತ್ತಿದೆ. ಇದರೊಂದಿಗೆ ತಲಕಾವೇರಿ ತೀರ್ಥೋದ್ಭವಕ್ಕೂ ಇನ್ನು ತಿಂಗಳ ಅವಧಿಯಷ್ಟೆ ಬಾಕಿ ಉಳಿದಿದೆ. ಈ ಪವಿತ್ರ ಕಾರ್ಯಕ್ಕೂ ಮಳೆಯ ಭೀತಿ ಇದೆ. ಅದರಲ್ಲೂ ಈ ಬಾರಿ ದಸರಾ ಉತ್ಸವ ಬೇಗನೆ ಎದುರಾಗಿದ್ದು, ವಿಜಯದಶಮಿಗೆ ಕೆಲವು ದಿನಗಳಷ್ಟೆ ಬಾಕಿ ಉಳಿದಿದೆ.
ಈ ತನಕ ಜಿಲ್ಲೆಯಲ್ಲಿ ೧೨೫.೪೦ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೯೫ ಇಂಚು ಮಳೆಯಾಗಿತ್ತು. ಪ್ರಸಕ್ತ ವರ್ಷ ಜಿಲ್ಲಾ ಸರಾಸರಿಯೇ ೩೦ ಇಂಚಿನಷ್ಟು ಹೆಚ್ಚಾಗಿದೆ. ಅದರಲ್ಲೂ ಮಡಿಕೇರಿ ತಾಲೂಕಿನಲ್ಲಿ ಈ ಬಾರಿ ಕಳೆದ ಸಾಲಿಗಿಂತ ೫೦ ಇಂಚು ಅಧಿಕ ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೩೧ ಇಂಚು ಮಳೆಯಾಗಿದ್ದರೆ, ಈ ಬಾರಿ ಮಳೆಯ ಪ್ರಮಾಣ ೧೮೧ ಇಂಚಿನಷ್ಟಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ೭೭.೪೬ ಇಂಚು ಮಳೆಯಾಗಿದ್ದರೆ ಈ ಬಾರಿ ೯೭ ಇಂಚಿನಷ್ಟಾಗಿದ್ದು, ಇಲ್ಲಿಯೂ ೨೦ ಇಂಚು ಅಧಿಕವಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲೂ ಕಳೆದ ವರ್ಷಕ್ಕಿಂತ ಈ ಬಾರಿ ೨೧ ಇಂಚು ಅಧಿಕ ಮಳೆ ಬಿದ್ದಿದೆ. ಕಳೆದ ವರ್ಷ ೭೬.೨೬ ಇಂಚು ಮಳೆಯಾಗಿದ್ದರೆ ಈ ಬಾರಿ ೯೭.೩೭ ಇಂಚು ಮಳೆ ಸುರಿದಿದೆ.