ಗೋಣಿಕೊಪ್ಪಲು, ಸೆ. ೧೭: ಬಾಳೆಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ. ೪೦ ಲಕ್ಷ ಲಾಭಾಂಶದಲ್ಲಿ ಉತ್ತಮವಾಗಿ ನಡೆಯುತ್ತಿದ್ದು ಸಂಘದ ಸದಸ್ಯರ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಚಿಮ್ಮಣಮಾಡ ಎಸ್. ಗಣಪತಿ ತಿಳಿಸಿದರು.
ಬಾಳೆಲೆಯ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ೬೦ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್. ಗಣಪತಿ ಸಂಘದಲ್ಲಿ ಗ್ರಾಮೀಣ ಭಾಗದ ೧೬೮೮ ಸದಸ್ಯರಿದ್ದು, ಸದಸ್ಯರಿಗೆ ಕಾಲಕ್ಕೆ ತಕ್ಕಂತೆ ರಸಗೊಬ್ಬರಗಳನ್ನು ವಿತರಿಸಲಾಗುತ್ತಿದೆ.
ವಿವಿಧೆಡೆ ಕಳಪೆ ರಸಗೊಬ್ಬರ ರೈತರಿಗೆ ಸರಬರಾಜಾಗಿರುವ ಹಿನ್ನಲೆಯಲ್ಲಿ ಆಡಳಿತ ಮಂಡಳಿಯು ಎಚ್ಚೆತ್ತುಕೊಂಡು ನಮ್ಮ ಭಾಗದ ಸದಸ್ಯರಿಗೆ ವಿತರಿಸಲಾಗುವ ರಸಗೊಬ್ಬರದಲ್ಲಿ ತೊಂದರೆ ಆಗದಂತೆ ಹೆಚ್ಚಿನ ನಿಗಾವಹಿಸಿ ರೈತರಿಗೆ, ಸದಸ್ಯರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರಗಳನ್ನು ರಾಜ್ಯ ಮಾರಾಟ ಮಂಡಳಿಗಳ ಮೂಲಕ ವಿತರಿಸಿ ರುವುದಾಗಿ ತಿಳಿಸಿದರು. ಸರ್ಕಾರ ಗಳಿಂದ ಬರುವ ಯೋಜನೆಗಳು, ಬಡ್ಡಿ ರಹಿತ ಸಾಲಗಳು ನೀಡಲಾಗುತ್ತಿದೆ. ಆಡಳಿತ ಮಂಡಳಿಯಲ್ಲಿ ಸುದೀರ್ಘ ಚರ್ಚೆ ನಡೆಸಿ ಅಂತಿಮ ತೀರ್ಮಾನ ಗಳನ್ನು ಕೈಗೊಂಡು ರೈತರಿಗೆ ಅನುಕೂಲಕರವಾದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಸಂಘದಲ್ಲಿ ಪಾರದರ್ಶಕತೆಯನ್ನು ಕಾಪಾಡಿ ಕೊಂಡಿದ್ದು ಇದರಿಂದಾಗಿ ಪ್ರಸ್ತುತ ಸಂಘವು ರೂ. ೩೯,೭೪,೯೭೫ ಲಕ್ಷ ಲಾಭ ಗಳಿಸಿದೆ. ರೈತರಿಗೆ ಇನ್ನಷ್ಟು ಪ್ರಯೋಜನಕಾರಿ ಕೆಲಸ ಮಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಶ್ರಮಿಸುತ್ತಿದೆ ಎಂದರು.
ಪ್ರಸ್ತುತ ಸಾಲಿನಲ್ಲಿ ಸಂಘವು ಹೆಚ್ಚಿನ ಲಾಭ ಗಳಿಸಿದ್ದು ಎ ಗ್ರೇಡ್ನಲ್ಲಿ ಮುಂದುವರಿದಿದೆ. ಸಂಘದ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಎ.ಎ. ಯಶೋಧ ಅವರು ನಿವೃತ್ತಿ ಹೊಂದಿದ್ದಾರೆ. ಖಾಲಿಯಾಗಿರುವ ಸ್ಥಾನಕ್ಕೆ ಸಂಘದ ಹಿರಿಯ ಸಹಾಯಕಿಯಾಗಿದ್ದ ಕೆ.ಎ. ಸೀತಮ್ಮ ಅವರನ್ನು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ತಾತ್ಕಾಲಿಕ ವಾಗಿ ಖಾಲಿ ಇರುವ ಕಿರಿಯ ಸಹಾಯಕರ ಹುದ್ದೆಗೆ ಎ.ಪಿ. ಅಜಯ್ ಅವರನ್ನು ನೇಮಕ ಮಾಡಿ ಕೊಳ್ಳಲಾಗಿದೆ.
ಸರ್ಕಾರದ ವತಿಯಿಂದ ಮುಂದಿನ ಗಾಂಧಿ ಜಯಂತಿ ದಿನದಂದು ರೈತರಿಗಾಗಿ ಯಶಸ್ವಿನಿ ಆರೋಗ್ಯ ವಿಮೆಯನ್ನು ಮರು ಚಾಲನೆ ಮಾಡಲಿದ್ದು ಸದಸ್ಯರು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕಾಗಿ ಮನವಿ ಮಾಡಿದರು. ಸಂಘದ ಸದಸ್ಯರು ಕರ್ನಾಟಕ ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಸಿಂಗಲ್ ಆರ್ಟಿಸಿ ಮಾಡಿಕೊಳ್ಳಲು ಹೆಚ್ಚಿನ ನಿಗಾ ವಹಿಸುವಂತೆ ಸದಸ್ಯರಿಗೆ ಸಲಹೆ ನೀಡಿದರು.
ಸಂಘದ ಪೊನ್ನಪ್ಪಸಂತೆ ಖಾಲಿ ಜಾಗದಲ್ಲಿ ನಬಾರ್ಡ್ ವತಿಯಿಂದ ೬೦ ಲಕ್ಷಗಳ ಯೋಜನೆಯಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿದ್ದು ಕಟ್ಟಡ ಕಾಮಗಾರಿ ಅಕ್ಟೋಬರ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ನಂತರ ಸಂಘದ ವತಿಯಿಂದ ನೂತನ ಶಾಖಾ ಕಚೇರಿ ಆರಂಭವಾಗಲಿದೆ. ಈ ಭಾಗದ ಜನರಿಗೆ ಇದು ಅನುಕೂಲಕರ ವಾಗಲಿದ್ದು ಶೀಘ್ರದಲ್ಲಿಯೇ ಕಾರ್ಯಾರಂಭ ನಡೆಯಲಿದೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಾಚಂಗಡ ಆರ್.ಗಾಯತ್ರಿ, ನಿರ್ದೇಶಕರಾದ ಆದೇಂಗಡ ಕೆ. ಚಂದ್ರಶೇಖರ್, ಪೋಡಮಾಡ ಸಿ. ನಾಚಪ್ಪ, ಕಾಂಡೇರ ಎಂ. ತೇಜ, ಮಾಚಂಗಡ ಎಂ. ಮುತ್ತಣ್ಣ, ಕಳ್ಳಿಚಂಡ ಬಿ. ಚಿತ್ರ, ಅಡ್ಡೇಂಗಡ ಆರ್. ಗೀತ, ಟಿ.ಕೆ. ಚಂದ್ರ, ಕೆ.ಆರ್. ಗಜಾನನ, ಹೆಚ್.ಹೆಚ್. ಗಣೇಶ್, ಲಲಿತ, ಹೆಚ್.ಎಂ. ಬಸವರಾಜು, ಡಿಸಿಸಿ ಬ್ಯಾಂಕ್ನ ಕೆ.ಬಿ. ದೇವಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಸಂಘದ ಹಿರಿಯ ಸದಸ್ಯರಾದ ಚೆಕ್ಕೇರ ಸೂರ್ಯ, ಆಳಮೇಂಗಡ ಬೋಸ್, ಮಲ್ಚೀರ ಬೋಸ್, ಕಾಟೀಮಾಡ ಶರೀನ್, ಆದೇಂಗಡ ವಿನು ಚಂಗಪ್ಪ ಸೇರಿದಂತೆ ಇನ್ನಿತರ ಹಿರಿಯರು ಸಭೆಯಲ್ಲಿ ಸಂಘದ ಬೆಳವಣಿಗೆಯ ಬಗ್ಗೆ ಹಲವು ಸಲಹೆಗಳನ್ನು ಒದಗಿಸಿದರು. ಸಂಘದ ಪ್ರಭಾರ ಸಿ.ಇ.ಒ. ಕೆ.ಎ. ಸೀತಮ್ಮ ವಂದಿಸಿದರು.